ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಯೋಗ ಸ್ಪರ್ಧೆ – ಶ್ರೀರಾಮ ಪದವಿ ಮಹಾ ವಿದ್ಯಾಲಯ ಕಲ್ಲಡ್ಕ

ಬಂಟ್ವಾಳ:ಸೆ.೫: ಯೋಗ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಒಂದು ಜೀವನ ಪದ್ದತಿಯಾದ್ದರಿಂದ ಇದು ಕೇವಲ ದೈಹಿಕ ಶಿಕ್ಷಣ ಚಟುವಟಿಕೆಯ ವಿಭಾಗವಾಗದೇ ಇದಕ್ಕಾಗಿಯೇ ಪ್ರತ್ಯೇಕ ವಿಭಾಗವನ್ನು, ಉಪನ್ಯಾಸಕರನ್ನು ನೇಮಿಸಬೇಕಾಗಿದೆ. ಸರಕಾರವು, ಯೋಗಾಸಕ್ತರು ಇದಕ್ಕಾಗಿ ವಿಶೇಷವಾಗಿ ಪ್ರಯತ್ನಿಸಬೇಕಾಗಿದೆ. ಆದರೆ ಈ ಬಾರಿ ಸರಕಾರದ ನೇಮಕಾತಿಯಲ್ಲಿ ದೈಹಿಕ ಶಿಕ್ಷಣ ವಿಭಾಗಕ್ಕೆ ಯಾವುದೇ ಅವಕಾಶ ಸಿಗದಿರುವುದು ದುರಂತ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ|ಕಿಶೋರ್ ಕುಮಾರ್ ಸಿ.ಕೆ ಇವರು ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ ಇಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಯೋಗಾಸನ ಸ್ಫರ್ಧೆ ೨೦೧೭-೧೮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ವಹಿಸಿ ಶರೀರಕ್ಕೆ ಮಾತ್ರವಲ್ಲದೇ ಮನಸ್ಸಿಗೆ, ಬುದ್ಧಿಗೂ ಆಯೋಗ ಕೊಡುವುದೇ ಯೋಗ. ಸಾಂಸ್ಖೃತಿಕ ಭಾವನಾತ್ಮಕ, ಬುದ್ಧಿವಂತಿಕೆ ಇವೆಲ್ಲವುಗಳನ್ನು ಜೋಡಿಸುವುದು ಯೋಗ. ಯೋಗಾಸನ ಸ್ಫರ್ಧೆಗಾಗಿ ಅಲ್ಲ, ಅದು ಪ್ರದರ್ಶನಕ್ಕಿಲ್ಲ ನಿದರ್ಶನಕ್ಕೆ. ಶಾರೀರಿಕವಾಗಿ ನಾವು ಹೇಳಿದಂತೆ ನಮ್ಮ ಮನಸ್ಸು ಕೇಳಿದರೆ ನಂತರದ ಹಂತದಲ್ಲಿ ಮನಸ್ಸು, ಬುದ್ಧಿಗಳನ್ನು ಬಗ್ಗಿಸಬಹುದು. ಜಗತ್ತಿನ ಜನ ಭಾರತದ ವಿದ್ಯೆಗೆ ಬೆಲೆಕೊಟ್ಟು ಬರುತ್ತಿದ್ದಾರೆ. ಜೀವನದ ಎಲ್ಲ ಸಮಸ್ಯೆಗಳಿಗೆ ಯೋಗದಲ್ಲಿ ಉತ್ತರವಿದೆ. ನಾವೆಲ್ಲ ಯೋಗ ಮಾರ್ಗಗಳನ್ನು ಅನುಸರಿಸೋಣ ಎಂದರು.
ವೇದಿಕೆಯಲ್ಲಿ: ಶ್ರೀ ನಾಗರಾಜ ಪೂಜಾರಿ ಉಡುಪಿ ಅಗ್ನಿಶಾಮಕದಳ ಕುಂದಾಪುರ, ಶ್ರೀ ಸುದೇಶ್ ಭಂಡಾರಿ ಕಿನ್ನಿಮಜಲು ಬೀಡು ಇರಾ ಚಲನಚಿತ್ರ ನಿರ್ಮಾಪಕರು ಉದ್ಯಮಿ, ಶ್ರೀ ಗೋಪಾಲ ಅಶ್ವತ್ಥಡಿ ಇರಾ ಗ್ರಾಮಪಂಚಾಯತ್ ಸದಸ್ಯರು ಹಾಗೂ ಪ್ರತಾಪ ಕ್ರೀಡಾ ಸಂಘದ ನಿರ್ದೇಶಕ ಅರವಿಂದ ಪ್ರಸಾದ್ ಉಪಸ್ಥಿತರಿದ್ದರು.
ಒಟ್ಟು ೧೮ ಕಾಲೇಜುಗಳಿಂದ ೧೩೨ ವಿದ್ಯಾರ್ಥಿಗಳು ಭಾಗವಹಿಸಿದ್ದರು, ವಿವಿಧ ಕಾಲೇಜುಗಳಿಂದ ದೈಹಿಕ ಶಿಕ್ಷಕರು, ವ್ಯವಸ್ಥಾಪಕರು ಹಾಗೂ ತೀರ್ಪುಗಾರರು ಆಗಮಿಸಿದ್ದರು.

Leave a Reply