ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಧ್ವನಿಗೆ ಧನಿ ಗೂಡಿಸಿದವರು ಆರ್. ಎಸ್. ಎಸ್ ಕಾರ್ಯಕರ್ತರು : ಡಿ. ಎಚ್ ಶಂಕರಮೂರ್ತಿ
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಧ್ವನಿಗೆ ಧನಿ ಗೂಡಿಸಿದವರು ಆರ್. ಎಸ್. ಎಸ್ ಕಾರ್ಯಕರ್ತರು. ಅಂದು ಜಯಪ್ರಕಾಶ್ ನಾರಾಯಣ್ ಆಡಿದ ಮಾತಾದ ತುರ್ತುಪರಿಸ್ಥಿತಿಯ ಹೋರಾಟಗಾರರನ್ನು ಫ್ಯಾಸಿಸ್ಟ್ ಎಂದು ಕರೆದರೆ ನಾನು ಕೂಡ ಫ್ಯಾಸಿಸ್ಟೇ ಎಂಬ ಮಾತನ್ನು ಕರ್ನಾಟಕ ಮೊದಲ ತುರ್ತುಪರಿಸ್ಥಿತಿಯ ಸತ್ಯಾಗ್ರಹಿ, ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಡಿ. ಎಚ್ ಶಂಕರಮೂರ್ತಿ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ತುರ್ತುಪರಿಸ್ಥಿತಿಯ ಒಂದು ನೆನಪು ಎಂಬ ವಿಚಾರ ಸಂಕಿರಣವನ್ನು ಪಾರಿವಾಳವನ್ನು ಪಂಜರದಿಂದ ಬಂಧನದಿಂದ ಮುಕ್ತಗೊಳಿಸುವುದರ ಮೂಲಕ ಉದ್ಘಾಟಿಸಿ ಮಾತಾನಾಡಿದರು.
ಇಂದಿರಾಗಾಂಧಿ ಅಲಹಾಬಾದ್ ಕೋರ್ಟು ನೀಡಿದ ತೀರ್ಪನ್ನು ತಿರಸ್ಕರಿಸಿ ೧೯೭೫ ಜೂನ್ ೨೫ ರಂದು ತುರ್ತುಪರಿಸ್ಥಿತಿಯನ್ನು ಹೊರಡಿಸಿ ದೇಶದ್ಯಾದಂತ ಸಂಘದ ಕಾರ್ಯಕರ್ತರ ಮತ್ತು ಹೋರಾಟಗಾರರ ಮೇಲೆ ದಿಗ್ಬಂಧನ ಹೇರುತ್ತಾರೆ. ತುರ್ತುಪರಿಸ್ಥಿತಿ ದೇಶಕ್ಕೆ ಮಾರಕ ಅದು ತೊಲಗಬೇಕು ಎಂಬ ಧ್ಯೇಯವನ್ನಿಟ್ಟು ೧೯೭೫ ಸ್ವಾತಂತ್ರ್ಯಕ್ಕೋಸ್ಕರ ಕಾರ್ಯಕರ್ತರು ಹೋರಾಡಿದರು. ಆರ್.ಎಸ್.ಎಸ್. ಮತ್ತು ಭಾ.ಜ.ಪ. ಹೋರಾಟಗಾರರಿಗೆ ಯಾವುದೇ ಅಧಿಕಾರದ ಆಸೆಯಿರಲಿ ಬದಲಾಗಿ ದೇಶವನ್ನು ಸರ್ವಾಧಿಕಾರದಿಂದ ಮುಕ್ತಗೊಳಿಸುವ ಪಣ ತೊಟ್ಟಿದರು ಎಂದು ಹೇಳಿದರು.
ಅಂದಿನ ಹೋರಾಟದ ನಿಲುವು ಪ್ರಧಾನಿ ಮೋದಿಯವರ ಇಂದಿನ ಆಳ್ವಿಕೆಯಲ್ಲಿ ನಾವು ಕಾಣಬಹುದು. ಅಬ್ದುಲ್ ಕಲಾಂರವರ ಕನಸ್ಸಿನ ಭಾರತದ ಯೋಜನೆಗೆ ಇಂದಿನ ಯುವ ಜನಾಂಗ ಮುನ್ನಡೆಯಾಗಬೇಕು ಎಂದರು.
ತನ್ನ ಅನುಭವದ ಕಥನವನ್ನು ತೆರೆದಿಟ್ಟ ಡಿ. ಎಚ್ ಮೂರ್ತಿಯವರು ಜೈಲಿನಲ್ಲಿ ಭಾರತ್ ಮಾತಾಕೀ ಜೈ ಎಂದು ಹೇಳಿದಾಗ ಪೋಲೀಸರು ಇವರನ್ನು ದೇಶ ದ್ರೋಹಿ ಎಂದು ಕರೆಯುತ್ತಾರೆ. ಈ ಮಾತು ದೇಶ ದ್ರೋಹಿಯ ಮಾತಾದರೆ ನನಗೆ ಗಲ್ಲು ಶಿಕ್ಷೆ ಕೊಡಿ ಎಂದು ಹೇಳಿದ ಆ ಸಂದರ್ಭವನ್ನು ನೆನಪಿಸಿದರು.
೧೯೭೫ರ ಹೋರಾಟದಲ್ಲಿ ಪ್ರಪಂಚದ ಅಗ್ರರಾಷ್ಟ್ರಗಳಲ್ಲಿ ಒಬ್ಬ ಉತ್ತಮ ಪ್ರಭಾವಿ ವ್ಯಕ್ತಿ ಸಿಕ್ಕಿದ್ದಾರೆ ಎಂದರೆ ಶೇಷಾದ್ರಿ ರಾಮಣ್ಣರವರಂತಹ ಪ್ರೇರಣಾ ಕರ್ತರುಗಳಿಂದ ಎಂದರು. ಈ ಸಂದರ್ಭದಲ್ಲಿ ದೇಶಾದಾದ್ಯಂತ ಹೋರಾಟನೆಗೆ ಪ್ರಚೋದನೆ ನೀಡಿದ ವಾಜಪೇಯಿ, ಆಡ್ವಾಣಿ, ದಂಡಾವತಿ ಇವರು ಭಾರತ ಮಾತಾ ಕೀ ಜೈ ಎಂದು ಭಾರತ ಮಾತೆಗಾಗಿ ಘೋಷಣೆ ಕೂಗಿದ್ದಕ್ಕೆ ಇಂದಿರಾಗಾಂಧಿ ಸರಕಾರ ಇವರುಗಳನ್ನು ಬಂಧಿಸಿತು ಎಂದರು.
ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಡಾ|| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ತುರ್ತುಪರಿಸ್ಥಿತಿಯಲ್ಲಿ ಅತ್ಯಂತ ಪ್ರಭಾವಿ ಸಾಧನವಾದ ಕಹಳೆ ಪತ್ರಿಕೆಯ ಪ್ರಚಾರದ ನೆನಪಿನ ಬುತ್ತಿಯನ್ನು ತೆರೆದಿಟ್ಟರು. ಬ್ರಿಟೀಷ್ ಸರಕಾರಕ್ಕಿಂತಲು ಇಂದಿರಗಾಂಧಿ ಸರಕಾರದ ಆಳ್ವಿಕೆಯಲ್ಲಿ ಜನ ರೈತರು, ಹೋರಾಟಗಾರರು ಜಾಸ್ತಿ ಲಾಠಿ ಏಟು ತಿಂದರು. ಆ ಕಾಲದಲ್ಲಿ ಅನೇಕ ಹೋರಾಟಗಾರರಿಗೆ ಮನೆಯ ತಾಯಂದಿರೇ ಸ್ಫೂರ್ತಿಯ ಶಕ್ತಿಯಾದರು ಎಂದರು.
ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಾಯಾಜಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಡಾ|| ಪ್ರಭಾಕರ ಭಟ್ ಕಲ್ಲಡ, ಪ್ರಾಚಾರ್ಯರಾದ ಕೃಷ್ಣಪ್ರಸಾದ ಕಾಯರ್ಕಟ್ಟೆ ಉಪಸ್ಥಿತರಿದ್ದರು. ಕುಟುಂಬ ಪ್ರಭೋಧನ್ ಪ್ರಮುಖ್ ಸು.ರಾಮಣ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು.
೧೯೭೫-೭೭ರ ನಡುವಿನ ತುರ್ತುಪರಿಸ್ಥಿತಿಯ ವಿವಿಧ ಘಟನಾವಳಿಗಳ ಸಚಿತ್ರವಾಗಿರುವಂತಹ ಭುಗಿಲು ಕೈಪಿಡಿಯನ್ನು ಬಿಡುಗಡೆಗೊಳಿಸಿದರು.
ತುರ್ತುಪರಿಸ್ಥಿತಿಯ ಸಂದರ್ಭ ನೆನಪು ಮಾಡುವಂತಹ ಹೇಳಿಕೆ, ಚಿತ್ರಗಳು ಮತ್ತು ಪತ್ರಿಕೆಗಳನ್ನೊಳಗೊಂಡ ಘಟನಾವಳಿಗಳ ಪ್ರದರ್ಶಿನಿಯ ಉದ್ಘಾಟನೆಯನ್ನು ತುರ್ತುಪರಿಸ್ಥಿತಿಯ ಮೀಸಾಬಂಧಿ ಹೋರಾಟಗಾರ್ತಿ ಸುಮತಿ ಶೆಣೈ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
೨೨೦ ತುರ್ತುಪರಿಸ್ಥಿತಿಯ ಮೀಸಾಬಂಧಿ ಹೋರಾಟಗಾರರು, ಮಂಗಳೂರು ವಿಶ್ವವಿದ್ಯಾನಿಲಯದ ೩೨ ಕಾಲೇಜುಗಳಿಂದ ೧೩೪ ವಿದ್ಯಾರ್ಥಿಗಳು, ೩೭ ಉಪನ್ಯಾಸಕರು, ೮೦ ಬೇರೆ ಬೇರೆ ಸಂಘದ ಪ್ರತಿನಿಧಿಗಳು, ಒಟ್ಟು ೯೬೯ ಮಂದಿ ಭಾಗವಹಿಸಿದ್ದರು.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೋರಾಟಗಾರರಿಗೆ ಸಿಕ್ಕಿದ್ದು ಬಹಳ ಅಮೂಲ್ಯವಾದ ಸತ್ಯದ ಪುನಃಪ್ರದರ್ಶನ. ಈ ದೇಶದ ಮಣ್ಣಿನ ಅಂತಃ ಸತ್ವದ ದಿವ್ಯಾನುಭವ. ಭಾರತ ಜಗತ್ತಿನಲ್ಲಿ ಮೊತ್ತ ಮೊದಲು ಹುಟ್ಟಿದ ದೇಶ. ಪ್ರಪಂಚಕ್ಕೆ ಹಿರಿಯಣ್ಣ. ಭಾರತ ದೇಶಕ್ಕೆ ಎಷ್ಟೇ ಆಕ್ರಮಣಗಳಾದರೂ, ಆಘಾತಗಳಾದರೂ ದೇಶದ ಜೀವನಯಾತ್ರೆ ಎಂದೂ ಮುಕ್ಕಾಗಲಿಲ್ಲ, ಯಾತ್ರೆ ಪೂರ್ಣ ವಿರಾಮವಿಲ್ಲ. ಭಾರತ ಅಖಂಡ, ಅವಿಚಿನ್ನವಾಗಿ ಮುಂದುವರಿಯುತ್ತಾ ಬಂತು ಎಂದು ಅಖಿಲ ಭಾರತ ಕುಟುಂಬ ಪ್ರಭೋಧನ್ ಪ್ರಮುಖ್ ಸು.ರಾಮಣ್ಣ ಹೇಳಿದರು.
ಅವರು ಕಲ್ಲಡ್ಕ ಶ್ರೀ ರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ತುರ್ತುಪರಿಸ್ಥಿತಿಯ ಒಂದು ನೆನಪು ಮತ್ತು ಸಂದೇಶ ಎಂಬ ವಿಚಾರ ಸಂಕಿರಣದ ಸಮಾರೋಪ ಭಾಷಣದಲ್ಲಿ ಮಾತನಾಡಿದರು.
ಭಾರತದ ಮಣ್ಣಿನ ಗುಣವೇ ಭಾರತೀಯರಲ್ಲಿ ಮುಂದುವರಿಯುವುದು. ಸೋಲನ್ನು ಒಪ್ಪಿಕೊಂಡು, ಭೂಮಿಗೆ ಒರಗುವುದಲ್ಲ, ಬದಲಾಗಿ ಸೋಲನ್ನು ಸವಾಲನ್ನಾಗಿ ಸ್ವೀಕರಿಸಿ, ಧರ್ಮದ ವಿಜಯದಲ್ಲಿ ಪರಮನಂಬಿಕೆಯನ್ನಿಟ್ಟ ಜನ ಭಾರತೀಯರು. ಎಲ್ಲಿ ಧರ್ಮವಿದೆಯೋ ಅಲ್ಲಿ ಗೆಲವು ಶತಸಿದ್ಧ. ಭಾರತ ದೇಶ ಇದಕ್ಕೆ ಪ್ರತ್ಯಕ್ಷವಾದ ಜ್ವಲಂತವಾದ ಉದಾಹರಣೆ. ಅದಕ್ಕಾಗಿ ಭಾರತದ ಜೀವನಯಾತ್ರೆ ಸೋಲಿನ ಅಪಮಾನದ ಜೀವನಯಾತ್ರೆ ಅಲ್ಲ. ಭಾರತೀಯರ ಜೀವನಯಾತ್ರೆ, ತಾತ್ಕಾಲಿಕವಾಗಿ ಹಿಮ್ಮೆಟ್ಟಬೇಕಾಗಿ ಬಂದರು ಸಹ ಅಂತಿಮವಾಗಿ ಅಧರ್ಮದ ಮೇಲೆ ಜಯಗಳಿಸುವ ಜೀವನಯಾತ್ರೆ ನಮ್ಮದು ಎಂದರು.
ಸತತ ಸಂಘರ್ಷ ಭಾರತೀಯರ ಜಾತಕದಲ್ಲಿ ಬರೆದಿದೆ. ಸಂಘರ್ಷದಲ್ಲಿ ನೋವಿದೆ ಆದರೆ ಸಾವಿಲ್ಲ. ಆತ್ಮವಿಶ್ವಾಸವಿದೆ, ಆತ್ಮಹೀನಯತೆಯಿಲ್ಲ ಇಲ್ಲ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಹೋರಾಟಗಾರರಿಗೆ ಆದ ಲಾಭ ಭಾರತದ ಮಣ್ಣಿನ ಅಂತಃಶಕ್ತಿಯ ಅನುಭವ ಎಂದರು.
ಯಾರು ನಿರೀಕ್ಷೆ ಮಾಡಲಾಗದ ಬದಲಾವಣೆ ತುರ್ತುಪರಿಸ್ಥಿತಿಯ ಚುನಾವಣೆಯಲ್ಲಿ ನಡೆಯಿತು. ಅಂದಿನ ಚುನಾವಣೆ ಪ್ರಚಾರಕ್ಕೆ ಸಮಯವಿಲ್ಲ. ಹಣವಿಲ್ಲ. ಚುನಾವಣೆಯ ಬಹಿಷ್ಕಾರವೇ ಸರಿ ಎಂಬ ತೀರ್ಮಾನಕ್ಕೆ ಬಂದಂತಹ ಸಮಯದಲ್ಲಿ ಅದರ ಸದುಪಯೋಗ ಪಡೆದವರು ಹೋರಾಟಗಾರ ಕಾರ್ಯಕರ್ತರು. ಚುನಾವಣೆ ಸ್ಪರ್ಧೆಮಾಡಿ ಗೆಲ್ಲಬೇಕು ಅನ್ನುವ ಅಗತ್ಯವಿಲ್ಲ, ಬದಲಾಗಿ ಚುನಾವಣೆ ದೈವದತ್ತವಾದ ಒಂದು ಸದಾವಕಾಶ. ೨೧ ತಿಂಗಳಿಂದ ನಡೆಯುವ ಅನ್ಯಾಯವನ್ನು ಪ್ರಚಾರದಲ್ಲಿ ಹೇಳಬಹುದು. ಕೋಟಿ ಕೋಟಿ ಜನರಲ್ಲಿ ವಿಶ್ವಾಸ ಮೂಡಿಸಬಹುದು ಅದು ಹೋರಾಟದ ನಿರ್ಣಾಯಕವಾದ ಮಜಲು ಎಂದರು.
ಚುನಾವಣೆ ಘೋಷಣೆ ಮಾಡಿದಾಗ ತುಂಬಾ ಸಂತೋಷಗೊಂಡವರು ಆರ್ ಎಸ್.ಎಸ್. ಕಾರ್ಯಕರ್ತರು. ಯುವಕರ ಮೇಲೆ ನಂಬಿಕೆ ಇಟ್ಟು, ವಿದ್ಯಾರ್ಥಿ ಶಕ್ತಿ ಇಂದಿನ ರಾಷ್ಟ್ರಶಕ್ತಿ ಹೀಗೆ ವಿಶ್ವಾಸಬಲದ ಮೇಲೆ ಸಂಘ ಹೋರಾಟಕ್ಕೆ ಕರೆ ಕೊಟ್ಟಾಗ ಸೇರಬೇಕು ಎಂದು ವಿದ್ಯಾರ್ಥಿಗಳಿಗೆ ಅನಿಸಿತು. ವಿದ್ಯಾರ್ಥಿ ಶಕ್ತಿಯೂ ಹೋರಾಟಕ್ಕೆ ದುಮ್ಮುಕ್ಕಿತ್ತು ಎಂದರು.
ವಿಕ್ರಮ ವಾರಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಮಾತನಾಡಿ ಕಹಳೆಯ ಪತ್ರಿಕೆಯ ಅಂದಿನ ಹೋರಾಟದ ನೆನಪು, ಅನುಭವ, ಆ ಸಮಯದಲ್ಲಿ ಪತ್ರಿಕೆಯಲ್ಲಿ ತಾನೇ ಮುಂದೆ ನಿಂತು ಭೂಗತ ರೀತಿಯಲ್ಲಿ ಪತ್ರಿಕೆಯ ಪ್ರಚಾರ ನಡೆಸಿದ ಸಂಪಾದಕೀಯ ಸ್ವ ಅನುಭವವನ್ನು ವಿವರಿಸಿದರು.
ತುರ್ತುಪರಿಸ್ಥಿತಿಯ ಹೋರಾಟಗಾರರಾದ ನಾಗೇಶ್ ರಾವ್, ರಾಮಕೃಷ್ಣಭಟ್, ಡಾ| ಪ್ರಭಾ ಕಾಮತ್, ಮೋಹನ್ ರೈ, ಗಣೇಶ್ ಹೆಗ್ಡೆ, ಶ್ಯಾಮ್ ರೈ, ಪುಷ್ಪಲತಾ, ಶೇಷಪ್ಪ, ಕಾರ್ಯಪ್ಪ ಇವರುಗಳು ಮಾತನಾಡಿ ಜೈಲುವಾಸದ ಚಪತಿ ಶಿಕ್ಷೆ, ಏರೋಪ್ಲೇನ್ ಶಿಕ್ಷೆಯ ಅನುಭವಗಳನ್ನು ಹಂಚಿಕೊಂಡರು. ಅಂದು ಜನರಿಗೆ ಕಹಳೆ ಪತ್ರಿಕೆಯನ್ನು ಸಂತೆಯಲ್ಲಿ ವಿತರಿಸುತ್ತಿದ್ದ ಹೋರಟಗಾರರನ್ನು ಪೋಲಿಸರು ಎಳೆದುಕೊಂಡು ಹೋದ ಕ್ಷಣ, ಮೈಚರ್ಮ ಏಳುವವರೆಗೆ ಹೊಡೆದ ನೋವಿನ ಅನುಭವ, ತಮ್ಮವರನ್ನು ಕಳೆದುಕೊಂಡ ಘಳಿಗೆ ಇವೆಲ್ಲವನ್ನೂ ವೇದಿಕೆಯಲ್ಲಿ ನೆನಪಿಸುತ್ತಾ ತನ್ನ ಸಹಪಾಠಿ ಮಿತ್ರರೊಂದಿಗೆ ಕಣ್ಣೀರಿಡುತ್ತ ಅನುಭವಗಳನ್ನು ಹಂಚಿಕೊಂಡರು.
ತುರ್ತುಪರಿಸ್ಥಿತಿಯ ಹೋರಾಟಗಾರರಲ್ಲಿ ಡಾ. ಪ್ರಭಾ ಕಾಮತ್ ಜೈಲುವಾಸ ಅನುಭವಿಸಿದರಲ್ಲಿ ಅತ್ಯಂತ ಸಣ್ಣ ವಯಸ್ಸಿನವರು. ಪುತ್ತೂರಿನ ನರಿಮೊಗರಿನ ಮೋಹನ್ ರೈ ೮ ಬಾರಿ ಸತ್ಯಾಗ್ರಹ ನಡೆಸಿ ಮೀಸಾ ಬಂಧನಕ್ಕೆ ಒಳಗಾದವರು.
ಸಮಾರಂಭದಲ್ಲಿ ಭಾಗವಹಿಸಿದ ೨೨೦ ಮೀಸಾಬಂಧಿ ಹೋರಾಟಗಾರರಿಗೆ ಸಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಲ್ಲದೇ ತುರ್ತುಪರಿಸ್ಥಿತಿಯ ಸಂದರ್ಭವನ್ನು ನೆನಪಿಸುವ ಹಿನ್ನಲೆಯಲ್ಲಿ ಅಣುಕು ಜೈಲಿನ ನಿರ್ಮಾಣ ಮಾಡಲಾಗಿತ್ತು.
ವೇದಿಕೆಯಲ್ಲಿ ದೆಹಲಿಯ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯವಾದಿಗಳು ಹೆಬ್ರಿ ಬಾಲಕೃಷ್ಣ ಮಲ್ಯ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಡಾ|| ಪ್ರಭಾಕರ ಭಟ್ ಕಲ್ಲಡ್ಕ, ಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಾಯಾಜಿ, ತುರ್ತುಪರಿಸ್ಥಿತಿಯ ಮಹಿಳಾ ಹೋರಾಟಗಾರ್ತಿ ಸುಮತಿ ಶೆಣೈ ಉಪಸ್ಥಿತರಿದ್ದರು. ಸುಮಾರು ಒಂದು ಘಂಟೆಗಳ ಕಾಲ ಪ್ರಶ್ನೋತ್ತರ ಅವಧಿಗೆ ಸಂವಾದ ಕಾರ್ಯಕ್ರಮ ನಡೆಯಿತು.