ಅನ್ನ ಮತ್ತು ಶಿಕ್ಷಣದಿಂದ ಈ ಸಮಾಜವನ್ನು ಮೇಲೆತ್ತಲು ಸಾಧ್ಯ.: ಅಡ್ಯಂತಾಯ
ಬಂಟ್ಟಾಳ.೧೫, ಜ: ಅನ್ನ ಮತ್ತು ಶಿಕ್ಷಣದಿಂದ ಈ ಸಮಾಜವನ್ನು ಮೇಲೆತ್ತಲು ಸಾಧ್ಯ. ಪಾವಿತ್ರ್ಯತೆ, ಸೇವೆ, ಸಹನೆ, ತ್ಯಾಗ, ಶೀಲ, ವಿವೇಕವಾದ ಶಕ್ತಿಯಿಂದ ಭಾರತ ನವಭಾರತವಾಗುತ್ತದೆ ಎಂದು ಕಲ್ಲಡ್ಕ ಶ್ರೀ ರಾಮ ಹೈಸ್ಕೂಲು ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಹೇಳಿದರು. ಅವರು ಕಲ್ಲಡ್ಕ ಶ್ರೀ ರಾಮ ಕಾಲೇಜಿನ ಪದವಿ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಹಮ್ಮಿಕೊಂಡ ರಾಷ್ಟ್ರೀಯ ಯುವ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ, ಇಡೀ ದೇಶಕ್ಕೆ, ಜಗತ್ತಿಗೆ ಹಿಂದೂ ಎನ್ನುವಾಗ ವಿದ್ಯುತ್ ಸಂಚಾರವಾಗುವಂತೆ ಮಾಡಿದ ಧೀರ, ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದ ಎಂದರು. ರಾಜಾಶ್ರಯ, ಸಿರಿವಂತ, ಬಡವ-ಬಲ್ಲಿದ, ಸಾಮಾನ್ಯ ಜನಗಳ ನಡುವೆ ದೇಶದ ಸ್ಥಿತಿಗತಿಗತಿಗಳನ್ನು ಕಣ್ಣಾರೆ ಕಂಡು, ಒಳಿತುಕೆಡುಕುಗಳನ್ನು ಅರ್ಥಮಾಡಿಕೊಂಡ, ಸ್ತ್ರೀ ಶಿಕ್ಷಣ, ಸ್ವಾಭಿಮಾನ, ಅದೆಷ್ಟೋ ಸಂಸ್ಕೃತಿಗಳನ್ನು ಸಲಹಿದ ಭಾರತ ಮಾತೆಯನ್ನು ಪೂಜೆ ಮಾಡುವ, ಇಡೀ ದೇಶದ ಉದ್ದಗಲ್ಲಕ್ಕೂ ಸಂಚಾರ ಮಾಡಿದ ಮಹಾನ್ ತೇಜಸ್ವಿ ಸ್ವಾಮಿ ವಿವೇಕಾನಂದ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ಕಟ್ಟೆ ವಹಿಸಿದ್ದರು. ಈ ಸಂದರ್ಭದಲ್ಲಿ ಎನ್.ಎಸ್.ಎಸ್. ವಿದ್ಯಾರ್ಥಿಗಳು ಪ್ರೇರಣಾಗೀತೆಯನ್ನು ಹಾಡಿದರು. ಎಲ್ಲಾ ವಿದ್ಯಾರ್ಥಿಗಳು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನುಡಿ ನಮನ ಸಲ್ಲಿಸಿದರು. ಕಾಲೇಜಿನ ಎನ್.ಎಸ್.ಎಸ್ ಯೋಜನಾಧಿಕಾರಿ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ಹರೀಶ್ ಸ್ವಾಗತಿಸಿದರು. ವಿದ್ಯಾರ್ಥಿ ರಾಘವೇಂದ್ರ ವಂದಿಸಿ, ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು.