ಓಣಂ ಹಬ್ಬ ಆಚರಣೆ- ಪದವಿ ಕಾಲೇಜಿನಿಂದ ಸಂತ್ರಸ್ತ ಪರಿಹಾರ ನಿಧಿಗೆ ಸ್ಪಂದನೆ

ಕಲ್ಲಡ್ಕ, ಆ:25, ಇತ್ತೀಚೆಗೆ ಸಂಭವಿಸಿದ ಭಾರಿ ಮಳೆಯ ಕಾರಣಕ್ಕೆ ನೆರೆ ಹಾಗೂ ಭೂಕುಸಿತದಿಂದ ತತ್ತರಿಸಿ ಹೋಗಿರುವ ಕೇರಳ ಮತ್ತು ಕೊಡವರ ಬಾಳು ದುಸ್ತರವಾಗಿದೆ. ಅವರುಗಳು ತಮ್ಮ ಸ್ವಂತ ಆಸ್ತಿ ಪಾಸ್ತಿ ಅಷ್ಟೇ ಅಲ್ಲದೇ ಅನೇಕ ಬಂಧು- ಭಾಂದವರನ್ನು ಕಣ್ಣೇದುರೇ ಕಳಕೊಳ್ಳುವ ಸ್ಥಿತಿ ಎಲ್ಲರನ್ನು ಕಂಗೆಡಿಸಿದೆ. ಇದು ಕೇವಲ ಸಹಾನುಭೂತಿಯಾಗಿ ಉಳಿಯದೇ ವಿವಿಧ ರೀತಿಯ ಆರ್ಥಿಕ ಸ್ಪಂದನೆಯ ಮೂಲಕ ಸಂತ್ರಸ್ತರಿಗೆ ನೆರವಾಗಬೇಕು. ಇದಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ನೀಡುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಬದಲಾಗಿ ನಾವು ನಮ್ಮ ದೈನಂದಿನ ವ್ಯವಹರಗಳಲ್ಲಿ ಅನಗತ್ಯ ಖಚು ಮಾಡುವ ಮೊತ್ತವನ್ನು ನೀಡಿದರೂ ಅನೇಕರ ಕಣ್ಣೊರೆಸಲು ಸಾಧ್ಯ. ಅಂತಹ ಒಂದು ಪ್ರಾಮಾಣಿಕ ಪ್ರಯತ್ನ ಪದವಿ ವಿಭಾಗದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಕಡೆಯಿಂದ ನಡೆದಿರುವುದು ಶ್ಲಾಘನೀಯ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ನುಡಿದರು.
ಅವರು ಸಂತ್ರಸ್ತರಿಗೆ ಸಂಗ್ರಹಿಸಿದ ನಿಧಿಯನ್ನು ಪದಾಧಿಕಾರಿಗಳ ಮೂಲಕ ಸ್ವೀಕರಿಸಿ ನಮ್ಮ ಪ್ರಯತ್ನ ಇಲ್ಲಿಗೆ ನಿಲ್ಲದೇ ಮುಂದಿನ ದಿನಗಳಲ್ಲಿ ಸ್ವತಃ ಸಂತ್ರಸ್ತರ ಬಳಿಗೆ ತೆರಳಿ ಸಹಕಾರ ನೀಡುವವರಾಗಬೇಕು ಎಂದು ಕರೆ ನೀಡಿದರು. ಅಲ್ಲದೇ ಸಂತ್ರಸ್ತಗೊಂಡವರ ಪೈಕಿ ೫ನೇ ತರಗತಿ ಮೇಲ್ಪಟ್ಟ ಯಾವುದೇ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ನಮ್ಮ ಸಂಸ್ಥೆ ದತ್ತು ತೆಗೆದುಕೊಂಡು ವಿದ್ಯಾಭ್ಯಾಸ ನೀಡಲಿದೆ ಎಂದು ಘೋಸಿದರು.
ಈ ಸಂದರ್ಭದಲ್ಲಿ ಪ್ರತೀವರ್ಷ ಆಚರಿಸುವಂತೆ ಓಣಂ ಹಬ್ಬವನ್ನು ಆಚರಿಸಲಾಗಿತ್ತಾದರೂ ಕೇರಳ ಕೊಡಗಿನ ದುಸ್ಥಿತಿಯ ಕಾರಣಕ್ಕಾಗಿ ಯಾವುದೇ ಆಡಂಬರ ಇರಲಿಲ್ಲ. ಶ್ರೀಮತಿ ಲಕ್ಷ್ಮೀ ರಘುರಾಜ್ ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಪೂಕಳಂ ಸ್ಪರ್ಧೆಯಲ್ಲಿ ಭಾಗವಹಿಸಿದರು. ವೇದಿಕೆಯಲ್ಲಿ ಪ್ರೌಢಶಾಲಾ ಅಧ್ಯಾಪಕರಾದ ಜಿನ್ನಪ್ಪ, ವಿನೋದ್ ಹಾಗೂ ಪದವಿ ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ನೇಹಾ ರಾಥೋರ್ ಸ್ವಾಗತಿಸಿ, ಅಕ್ಷತಾ ವಂದಿಸಿ, ಅನುಷಾ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply