Kreedothsava

“ಮಕ್ಕಳ ರೂಪದಲ್ಲಿರುವ ನಮ್ಮನ್ನು ದೇವರೆತ್ತರಕ್ಕೆ ಏರಿಸಿಕೊಳ್ಳುವ ಪ್ರಕ್ರಿಯೆಯೇ ಶಿಕ್ಷಣ- ಉದ್ಧರೇದಾತ್ಮನಾನಮ್”.

ಮನುಷ್ಯನ ಸರ್ವತೋಮುಖ ವಿಕಾಸವೇ ಶಿಕ್ಷಣದ ಗುರಿ. ಅಂದರೆ ವ್ಯಕ್ತಿಯ ಶಾರೀರಿಕ,ಮಾನಸಿಕ,ಬೌದ್ಧಿಕ,ಸಾಮಾಜಿಕ,ನೈತಿಕ ಮತ್ತು ಆಧ್ಯಾತಿಕ ವಿಕಾಸವೇ ಶಿಕ್ಷಣದ ಗುರಿ.
“ಶರೀರಮಾಧ್ಯಂ ಖಲುಧರ್ಮ ಸಾಧನಂ.”
“ಆರೋಗ್ಯವಂತ ಶರೀರದಲ್ಲಿ ಆರೋಗ್ಯವಂತ ಮನುಷ್ಯ.”

“A Sound mind in a sound body.”

ಎಂಬಂತೆ ಆರೋಗ್ಯವಂತ ಶರೀರ ಎಲ್ಲಾ ಸಾಧನೆಗಳಿಗೆ ಅನಿವಾರ್ಯವಾಗಿರುವುದರಿಂದ ಶಾರೀರಿಕ ಶಿಕ್ಷಣ ಮಹತ್ವಪೂರ್ಣವಾದುದು.

“Without Physical Education there is no education.”

ಅಂದಂತೆ ಶಾರೀರಿಕ ಶಿಕ್ಷಣವಿಲ್ಲದೆ ಶಿಕ್ಷಣ ಪರಿಪೂರ್ಣ ಆಗಲಾರದು. ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆಗೆ ಶಾರೀರಿಕ ಶಿಕ್ಷಣ ಅನಿವಾರ್ಯವಾದದ್ದರಿಂದ ಅದು ಶಿಕ್ಷಣದ ಒಂದು ಅವಿಭಾಜ್ಯ ಅಂಗ.

ಶಾರೀರಿಕ ಶಿಕ್ಷಣದಲ್ಲಿ ಕ್ರೀಡೆ ಒಂದು ಮಹತ್ವಪೂರ್ಣ ಅಂಶ. ತೊಟ್ಟಿಲ ಮಗುವಿನಿಂದ ಹಿಡಿದು ಚಟ್ಟಕ್ಕೆ ಹತ್ತಿರವಾದವರೆಗೆ ಎಲ್ಲರೂ ಕ್ರೀಡಾಸಕ್ತರೇ.

ಕ್ರೀಡೆ ಆರೋಗ್ಯ ನೀಡುವುದರೊಂದಿಗೆ ಅನುಶಾಸನ. ಪರಿಸರ ಪ್ರೇಮ, ದೇಶಭಕ್ತಿ, ಸಹನೆ, ಸ್ಪರ್ಧಾಮನೋಭಾವ, ಸಂಘಟನೆ, ನಾಯಕತ್ವ, ಆತ್ಮವಿಶ್ವಾಸ, ಸಾಹಸಪ್ರವೃತ್ತಿ, ಸಚ್ಛಾರಿತ್ರ್ಯ, ಉತ್ಸಾಹ, ಜಾಗೃತಿ, ಪರಸ್ಪರ ಸಹಕಾರ, ಸಾಮಾಜಿಕ ಸಾಮರಸ್ಯವೆಂಬೀ ಸದ್ಗುಣಗಳನ್ನು ವಿಕಾಸಗೊಳಿಸುತ್ತದೆ.

ಮಗುವಿನ ಶಾರೀರಿಕ, ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ ವಿಕಾಸಕ್ಕೆ ಕಾರಣವಾಗಿರುವ ಕ್ರೀಡೆ ಮತ್ತು ಶಾರೀರಿಕ ಪ್ರತಿಭೆಗಳ ವಿಶಿಷ್ಟ ಉತ್ಸವವೇ ಕ್ರೀಡೋತ್ಸವ.

ಕಲೆಯಿಂದ ಅಡಕವಾಗಿರುವ ಕಲ್ಲಡ್ಕದ ಹನುಮಾನ್ ನಗರದ ಸುಂದರ ಪರಿಸರದಲ್ಲಿ ಕಳೆದ ೩೦ ವರ್ಷಗಳ ಹಿಂದೆ ಬೀಜಾಂಕುರಗೊಂಡು ಇಂದು ಶಿಶುಮಂದಿರ, ಪ್ರಾಥಮಿಕಶಾಲೆ, ಪ್ರೌಢಶಾಲೆ, ಪದವಿಪೂರ್ವ ಮತ್ತು ಮಹಾವಿದ್ಯಾಲಯವಾಗಿ ವಿಕಾಸಗೊಂಡು ತಲೆಯೆತ್ತಿ ನಾಲ್ದೆಸೆಗೂ ಕಂಪುಸೂಸುತ್ತಿರುವ ಶ್ರೀರಾಮ ವಿದ್ಯಾಮಂದಿರದ ಹೊನಲು ಬೆಳಕಿನ ಕ್ರೀಡೋತ್ಸವ ಕಲ್ಲಡ್ಕ ಪರಿಸರದ ಜನತೆಗೊಂದು ನಾಡಹಬ್ಬ. ಅಂದರೆ ಅತಿಶಯೋಕ್ತಿ ಆಗಲಾರದು.
ವೈಯಕ್ತಿಕ ಮಹತ್ಸಾದನೆ, ಗುಂಪಿನ ಸಾಂಘಿಕ ವಿಭಿನ್ನ ರಚನೆಗಳ ವೈವಿಧ್ಯಪೂರ್ಣ ಸಾಮೂಹಿಕ ಚಟುವಟಿಕೆ, ಸಾಹಸಮಯ, ರೋಮಾಂಚಕ, ಚಾಕಚಕ್ಯತೆಯ, ಕಣ್ – ಕಿವಿಗಳಿಗಾನಂದಕರ, ಚಿತ್ತಾಕರ್ಷಕ, ರಾಷ್ಟ್ರಭಕ್ತಿಪ್ರೇರಕ ಮತ್ತೆ ಮತ್ತೆ ದರ್ಶನ ಮಾಡಬೇಕೆಂದು ಹಾತೊರೆವ ಭಿನ್ನವಿಭಿನ್ನ ವೈಶಿಷ್ಟಪೂರ್ಣ ಪ್ರತಿಭಾಪ್ರದರ್ಶನಗಳ ರಸಧಾರೆ ಹರಿಯುತ್ತದೆ ಈ ಕ್ರೀಡೋತ್ಸವದಲ್ಲಿ.

ಬಂದಿರುವ ಅತಿಥಿ-ಅಭ್ಯಾಗತ ಬಂಧುಗಳಿಗೆ ಕುಣಿದು ಕುಪ್ಪಳಿಸುತ್ತಾ-ನಕ್ಕು ನಲಿದಾಡುವ ಮುದ್ದು ಕಂದಮ್ಮಗಳ ನಿಷ್ಕಲ್ಮಶಭಾವದ ಹೃದಯಸ್ಪರ್ಶಿ ಸ್ವಾಗತ.
ತ್ಯಾಗ, ಶಾಂತಿ, ಸಮೃದ್ಧಿ, ವೈಶಾಲ್ಯತೆ, ಸಾಮರಸ್ಯ, ಪಾವಿತ್ರ್ಯತೆ, ಶೌರ್‍ಯ-ಸಾಹಸಗಳ ಸಂಕೇತವಾಗಿರುವ ವಿವಿಧ ವರ್ಣಗಳ ಧ್ವಜದಡಿಯಲ್ಲಿ ಘೋಷ್‌ನ ತಾಳಕ್ಕೆ ತಕ್ಕಂತೆ ಹೆಜ್ಜೆಯಿಡುತ್ತಾ ಶಿಸ್ತುಬದ್ಧರಾಗಿ-ಸಮವಸ್ತ್ರಧಾರಿಗಳಾಗಿ ಸಾಗುವ ಸೇರಿದ ಜನಸ್ತೋಮದ ಒಡಲಲ್ಲಿ ಸದ್ಭಾವನೆಗಳ ಸಂಚಲನಕ್ಕೆ ಕಾರಣವಾಗಿರುವ ಪಥಸಂಚಲನ.

ವಂಶಿ, ಶಂಖ, ಆನಕ, ಝಲ್ಲರಿ, ಪಣವ ಎಂಬೀ ಸ್ವದೇಶೀ ವಾದನಗಳಿಂದ ಹೊರಡಿಸಬಲ್ಲ ವಿಭಿನ್ನ,ವಿಶಿಷ್ಟ ಸ್ವದೇಶೀ ನಾದಗಳ ವಿಭಿನ್ನ ರಚನೆಗಳ ಘೋಷ್ ಪ್ರದರ್ಶನ.

ನಮ್ಮೊಳಗೆ ಆತ್ಮಜ್ಯೋತಿಯನ್ನು ಬೆಳಗಿಸಿದ ಜಗನ್ನಿಯಾಮಕನಾದ ಭಗವಂತನಿಗೆ ದೀಪದಾರತಿ-ದೀಪಾರತಿ.

ಪ್ರೌಢಶಾಲೆಯ ಬಾಲೆಯರಿಂದ ನವಿಲಿನ ಕುಣಿತ ಒಂದೆಡೆಯಾದರೆ ಛತ್ರಚಾಮರಧಾರಿ ಬಾಲೆಯರಿಂದ ಆಕರ್ಷಕ ನರ್ತನ.

ದಿನವಿಡೀ ಬೆಂದು ಬಸವಳಿದ ಶ್ರಮಜೀವಿಗಳ ಕರ್ಮಯೋಗಿಗಳ ಆಯಾಸ ಪರಿಹರಿಸಿ, ಆನಂದ ನೀಡುವ ಜನಪದ ನೃತ್ಯದ ಒಂದು ನೋಟ-ಹಾಲಕ್ಕಿ ಜನಾಂಗದ ವೇಷಭೂಷಣದೊಂದಿಗೆ ಹಾಲಕ್ಕಿ ನೃತ್ಯ.

ಕಿವಿಗಳಿಗೆ ಇಂಪು – ಕಂಗಳಿಗಾನಂದ ನೀಡುವ ನೃತ್ಯವೈವಿದ್ಯಗಳಿಂದ ಪುಳಕಿತಗೊಂಡ ಜನಮಾನಸವನ್ನು ಸಾಹಸ ಪ್ರಕ್ರಿಯೆಗೆ ಪ್ರಚೋದಿಸುವ ಏಕಚಕ್ರ-ದ್ವಿಚಕ್ರಗಳಲ್ಲಿ ಸಮತೋಲನ-ಸಾಹಸಮಯ ರೋಮಾಂಚಕ ಪ್ರದರ್ಶನ, ಎದೆ – ಹಣೆಗಳಿಂದ ಪುಡಿಗಟ್ಟಲಿರುವ ಟ್ಯೂಬ್‌ಲೈಟ್‌ಗಳ ಕೋಟೆ.
ಈ ನಾಡಿನ ಶೌರ್ಯ-ಸಾಹಸಗಳ ವೀರಗಾಥೆಯನ್ನು ಮತ್ತೆ ಕಣ್ಣಂಚಿನಲ್ಲಿ ತಂದು ಹೇಡಿತನವ ಸುಟ್ಟು ಬೂಸಿಯಾಗಿಸಿ ಕ್ಷಾತ್ರಭಾವವನ್ನು ಒಡಲಲ್ಲಿ ಬೀಜಾಂಕುರಗೊಳಿಸುವ ಮತ್ತೊಂದು ಮೈನವಿರೇಳಿಸುವ ಪ್ರದರ್ಶನ, ಬೆಂಕಿ ಸಾಹಸ.

ಆತ್ಮವಿಶ್ವಾಸ-ಧೈರ್‍ಯ-ಏಕಾಗ್ರತೆ-ಸತತ ಅಭ್ಯಾಸದಿಂದ ಎತ್ತರೆತ್ತರಕ್ಕೆ ವ್ಯಕ್ತಿ ಮತ್ತು ರಾಷ್ಟ್ರ ಏರಬಲ್ಲುದೆಂಬ ವಿಶ್ವಾಸ ಮೂಡಿಸುವ ಮಗದೊಂದು ರೋಮಾಂಚಕ ಪ್ರದರ್ಶನ,ಕೂಪಿಕಾ ಸಮತೋಲನ.
ಕಾಲಿಗೆ ಚಕ್ರ ಧರಿಸಿ ನವನವೀನ ಪ್ರದರ್ಶನಗಳ ಕಾಲ್ಚಕ್ರ(Scatting).

ಪತಂಜಲಿ ಮಹರ್ಷಿಗಳಿಂದ ಪ್ರವರ್ತಿಸಲ್ಪಟ್ಟ ಅಷ್ಟಾಂಗ ಯೋಗದಲ್ಲಿ ಯಮ-ನಿಯಮಗಳನ್ನು ಬಾಹ್ಯ ಆಂತರಿಕ ಶುದ್ಧೀಕರಣಕ್ಕಾದರೆ ಮೂರನೆಯದ್ದು.

ಸ್ಥಿರಂ ಸುಖಂ ಆಸನಂ. ಒಂದು ಸ್ಥಿತಿಯಲ್ಲಿ ಸ್ಥಿರವಾಗಿ ಮತ್ತು ಸುಖವಾಗಿ ಇರುವುದೇ ಆಸನ. ಆರೋಗ್ಯ, ಸಂರಕ್ಷಣೆಗೆ, ಶಾರೀರಿಕ-ಮಾನಸಿಕ ಸರ್ವತೋಲನಕ್ಕೆ, ಮನಸ್ಸಿನ ಏಕಾಗ್ರತೆಗೆ, ಗ್ರಹಣಶಕ್ತಿ-ಸ್ಮರಣಶಕ್ತಿ ಹೆಚ್ಚಿಸಲು, ಬುದ್ಧಿ ಚುರುಕುಗೊಳಿಸಲು, ಶರೀರ-ಮನಸ್ಸು-ಬುದ್ಧಿಗಳನ್ನು ಒಂದು ಗೂಡಿಸಿ ಆತ್ಮದೆಡೆಗೆ ಕೊಂಡೊಯ್ಯಲು ಯೋಗಾಸನ ಒಂದು ಶ್ರೇಷ್ಠ ಸಾಧನ.

ಯೋಗ ಪ್ರದರ್ಶನಕಲ್ಲ -ಸ್ಪರ್ದೆಗಲ್ಲ. ಆತ್ಮದರ್ಶನಕ್ಕೆ. ಜನಾಸಕ್ತಿ ಬೆಳೆಸಲು ಈ ಪ್ರದರ್ಶನವಷ್ಟೆ.

ಬಣ್ಣಬಣ್ಣದುಡುಗೆಯುಟ್ಟ ಪುಟಾಣಿಗಳು ನಲಿದಾಡುತ್ತಾ ಜಡೆನೇಯ್ದು ಕೋಲಾಟವಾಡುವ ಗುಜರಾತಿನ ದಾಂಡಿಯಾ ನೃತ್ಯವನ್ನೇ ಹೋಲುವ ಜಡೆಕೋಲಾಟ.

ನಿ:ಶಸ್ತ್ರರಾಗಿ ಸಾಹಸಪ್ರದರ್ಶಿಸುವ,ಆಕ್ರಮಣಕಾರಿಗಳನ್ನು ಹಿಮ್ಮೆಟ್ಟಿಸುವ ಯುದ್ಧಕಲೆಗಳ ಅನೇಕ ಕುಂಗಫ, ಕಲರಿ, ಜುಡೋ, ಕರಾಟೆ ಇತ್ಯಾದಿ. ಅಂತ ಯದ್ಧಕಲೆಗಳಲ್ಲಿ ಪ್ರಾಚೀನ ಭಾರತೀಯ ಯುದ್ಧಕಲೆ ನಿಯುದ್ಧದ ಪ್ರದರ್ಶನ-ಆತ್ಮರಕ್ಷಣೆಗೆ ಇನ್ನೊಂದು ಸಾಧನ.

ಬೆಂಕಿ ಬೆಳಕನ್ನು ಕೊಡುತ್ತದೆ. ಕತ್ತಲನ್ನು ಓಡಿಸುತ್ತದೆ. ಹಾಗೆಯೇ ಒಳಿತು-ಕೆಡುಕನ್ನು ಗುರುತಿಸುತ್ತದೆ. ಕೆಟ್ಟದನ್ನು ಸುಡುತ್ತದೆ.ಬೆಂಕಿಯುಗುಳುವ ದೊಂದಿದಾರಿಗಳಿಂದ ರಣಕಹಳೆಯ ಹೂಂಕಾರದ ಸದ್ದು ಮೊರೆವಂತೆ ಮಾಡುವ ದೊಂದಿ ಪ್ರದರ್ಶನ.

ನಮ್ಮೆಲ್ಲರನ್ನು ಯಕ್ಷಲೋಕಕ್ಕೆ ಕೊಂಡೊಯ್ಯುವ ಯಕ್ಷರೂಪಕ.

ಇಡೀ ಶಾಲೆಯ ಎಲ್ಲಾ ಮಕ್ಕಳನ್ನು ಸೇರಿಸಿಕೊಂಡು ವಿಭಿನ್ನ ರಚನೆಗಳಲ್ಲಿ ವಿವಿಧ ಆಕೃತಿಗಳಲ್ಲಿ ನವನವೀನ ನಯನ ಮನೋಹರ ಆಕೃತಿUಳಲ್ಲಿ ಭಯೋತ್ಪಾದಕತೆ, ಸಾಮಾಜಿಕ ಅನಿಷ್ಟಗಳ ವಿರುದ್ಧ ಜನಜಾಗೃತಿಯ ಸಂದೇಶ ನೀಡಿ ಇಡೀ ಜಗತ್ತಿಗೆ ಬೆಳಕು ನೀಡಬಲ್ಲ ಸಾಮರಸ್ಯ ಭರಿತ – ಸದೃಢ-ಶಕ್ತಿಶಾಲಿ ಜಗಜನನಿ – ಜಗದ್ಗುರು – ಪರಮ ವೈಭವ ಭಾರತ ನಿರ್ಮಾಣದ ಸಂಕಲ್ಪ ತೊಡುವ ಜನಸಾಗರಕ್ಕೆ ಪ್ರೇರಣೆ ನೀಡುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ/ಕಿಯರ ಸಾಮೂಹಿಕ ಪ್ರದರ್ಶನ.

 1. ಸಂಚಲನ- ವಿದ್ಯಾರ್ಥಿಗಳು ಘೋಷ್‌ನ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತ ಸಾಗುತ್ತಾರೆ.
 2. ಘೋಷ್ ಪ್ರದರ್ಶನ – ತಾಳದ ಲಯಕ್ಕೆ ತಕ್ಕಂತೆ ಕಾಲು ಹಾಕುತ್ತಾ ವಿವಿಧ ರಚನೆಯಲ್ಲಿ ದೇಶಿಯ ರಾಗ ಸಂಯೊಜನೆಯ ಸಂಗೀತದಿಂದ ಮನರಂಜಿಸುವ ಬಾಲಕ ಬಾಲಕಿಯರು
 3. ಜಡೆಕೋಲಾಟ – ಜಡೆ ಹೆಣೆಯುವುದು ಬಿಚ್ಚುವುದು ನೃತ್ಯದೊಂದಿಗೆ
 4. ನೃತ್ಯ ಭಜನೆ – ಭಜನೆಗೆ ಮನಸೋಲುವ ದೇವರು ನಮ್ಮೊಡನೆ ಕುಣಿಯಲಾರನೆ?
 5. ದೀಪಾರತಿ – ದೀಪ ಬೆಳಗಿಸುವ ಸಂಸ್ಕೃತಿಗೆ ಸೇರಿದ ನಾವು ದೀಪಧಾರಿಗಳಾಗಿ ಜಗವನ್ನೇ ಬೆಳಗಿಸಬಲ್ಲೆವು, ಓಂ ನಮಃ ಶಿವಾಯ
 6. ಮಲ್ಲಕಂಬ,  ತಿರುಗುವ ಮಲ್ಲಕಂಬ- ಕಂಬವನ್ನೇರುವುದು ನಮಗೇನು ಶ್ರಮವಲ್ಲ ಅದೊಂದು ಕಸರತ್ತು.
 7. ಯೋಗಾಸನ – ಜಗತ್ತಿನ ಅಶಾಂತಿಯನ್ನು ತಣಿಸುವ ಭಾರತೀಯ ಮನಃಶಾಸ್ತ್ರದ ಮೂಲ ಯೋಗಾಸನ.
 8. ನೃತ್ಯ ವೈವಿಧ್ಯ- ಜನಪದ ಸಾಹಿತ್ಯ ಎಷ್ಟೊಂದು ಮಧುರ ಭಾವಪೂರ್ಣ
 9. ಸೈಕಲ್ ಸಮತೋಲನ – ದ್ವಿಚಕ್ರ, ಏಕಚಕ್ರಗಳೆಲ್ಲ ಚಲಿಸಿ ತೋರಿಸಿವೆ ಮಾನವನಿಗೆ ಚರೈವೇತಿ ಚರೈವೇತಿ, ಮುಂದೆನಡೆ ಮುಂದೆನಡೆ ಇದರಲ್ಲಿ ಚಲಿಸದೆ ನಿಂತರೆ ಬಿದ್ದ, ಜೀವನದಲ್ಲೂ ಅದುವೆ ನಮಗೆ ಮುನ್ನಡೆ.
 10. ಬೆಂಕಿ ಸಾಹಸ – ಅಗ್ನಿದೇವನೊಳಗೆ ಹೊಕ್ಕು ಬರುವ ವೀರರಿವರು ಜೀವನದ ಅಗ್ನಿಪರೀಕ್ಷೆಯಲಿ ಸೋಲುವರೇ?
 11. ಕಾಲ್ಚಕ್ರ – ಕಾಲಲ್ಲಿ ಚಕ್ರ, ಬಾಯಲ್ಲಿ ಶರ್ಕರ ಕಾಲಚಕ್ರ ತಿರುಗಿದಲ್ಲಿ ಬಾಳಚಕ್ರ ಸಾಗಬಲ್ಲುದು
 12. ಕೂಪಿಕಾ- ಚಿಕ್ಕ ಅಂಶಗಳಿಗೆ ಸರಿಯಾಗಿ ಗಮನಕೊಟ್ಟಾಗ ದೊಡ್ಡವನ್ನು ಸಾಧಿಸಬಹುದು ಧೈರ್ಯ, ಏಕಾಗ್ರತೆಗಳ ಸಮ್ಮಿಲನ ಈ ಕೂಪಿಕಾ ಸಮತೋಲನ.

Click here to view more photos of Kreedothsava

||ಭಾರತ ಮಾತಾ ಕೀ ಜಯ್||