Histroy

ಇತಿಹಾಸ:
ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಆದರ್ಶಗಳಿಗೆ ಅನುಗುಣವಾಗಿ ಭಾರತೀಯ ಸಂಸ್ಕೃತಿಯ ಶ್ರೇಷ್ಠ ತತ್ವ ಆದರ್ಶಗಳ ಪಾರಂಪರಿಕ ಹಿನ್ನಲೆಯಲ್ಲಿ ಆರಂಭವಾದ ವಿದ್ಯಾಸಂಸ್ಥೆಯು ಶ್ರೀರಾಮ ವಿದ್ಯಾಕೇಂದ್ರ. ಮಾನವೀಯ ಮೌಲ್ಯಗಳೊಂದಿಗೆ ವಿದ್ಯಾರ್ಥಿಗಳಲ್ಲಿ ದೈಹಿಕ, ಬೌದ್ಧಿಕ, ಹಾರ್ದಿಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯವನ್ನು ಬೆಳೆಸುವುದರೊಂದಿಗೆ ರಾಷ್ಟ್ರೀಯ ಚಿಂತನೆಯ ಸಂಸ್ಕಾರ ನೀಡುವ ಸಂಕಲ್ಪದೊಂದಿಗೆ ಶಿಕ್ಷಣ ಸಂಸ್ಥೆ ನಿರಂತರವಾಗಿ ಬೆಳೆದು ಬಂದಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಸಣ್ಣ ಊರು ಕಲ್ಲಡ್ಕ. ಬಾಳ್ತಿಲ ಗ್ರಾಮದ ಹನುಮಾನ್ ನಗರದಲ್ಲಿರುವ ಪ್ರಶಾಂತ ವಾತವರಣದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ವಿವಿಧ ತರಗತಿಗಳು ಕಾರ್ಯನಿರ್ವಹಿಸುತ್ತಿವೆ.

ಶ್ರೀರಾಮ ಭಜನಾ ಮಂದಿರವು ಊರಿನ ಶ್ರದ್ಧಾ ಕೇಂದ್ರವಾಗಿದ್ದು, ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೇರಣೆಯ ಸ್ಥಳವಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆ ಕೇಂದ್ರವಾಗಿ ನೂರಾರು ಯುವಕರಿಗೆ ರಾಷ್ಟ್ರೀಯ ಕಾರ್ಯದಲ್ಲಿ ಸ್ಪೂರ್ತಿಯನ್ನು ನೀಡಿದೆ. ರಾಷ್ಟ್ರ ಜಾಗೃತಿಯ ಹೋರಾಟದಲ್ಲಿ ಹಲವು ನಾಯಕರನ್ನು ತೊಡಗಿಸಿಕೊಳ್ಳುವುದಕ್ಕೆ ಮಾರ್ಗದರ್ಶನ ಇಲ್ಲಿಂದ ಸಿಕ್ಕಿದೆ.

1980ರಲ್ಲಿ  ಇಲ್ಲಿನ ಕಾರ್ಯಕರ್ತರ ಚಿಂತನೆಯ ಫಲವಾಗಿ ಊರಿಗೆ ಅತಿ ಅಗತ್ಯವಾಗಿ ಬೇಕಾಗಿದ್ದ ಪ್ರೌಢಶಾಲೆಯ ಶ್ರೀರಾಮ ಭಜನಾ ಮಂದಿರಲ್ಲಿ ಆರಂಭಗೊಂಡಿತು. ಸುತ್ತುಮುತ್ತಲಿನ ಜನ ಆರ್ಥಿಕವಾಗಿ ಬಡತನದಲ್ಲಿದ್ದರೂ ತಮ್ಮ ಮಕ್ಕಳಿಗೆ ಸೂಕ್ತ ಶಿಕ್ಷಣವನ್ನು ಕೊಡಬೇಕೆಂಬ ಹೃದಯವಂತಿಕೆಯನ್ನು ಹೊಂದಿದ್ದರು. ಪುತ್ತೂರು ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶ್ರೀರಾಮ ಪ್ರೌಢಶಾಲೆಯು ಆರಂಭಗೊಳ್ಳುವ ಮೂಲಕ ಈಗಿನ ಬೃಹತ್ ವಿದ್ಯಾಸಂಸ್ಥೆಗೆ ನಾಂದಿಯಾಯಿತು. ಆರಂಭದಲ್ಲಿ ಶಿಕ್ಷಣ ಸಂಸ್ಥೆಗೆ ಕಲ್ಲಡ್ಕ ಪೇಟೆಯ ಸಮೀಪದ ೯ ಎಕ್ರೆ ಸ್ಥಳವನ್ನು ಸಂಸ್ಥೆಗೆ ಪಡೆಯುವಲ್ಲಿ ಹಲವು ಹೋರಾಟವನ್ನೇ ಮಾಡಬೇಕಾಯಿತು. ಮತೀಯ ಹಾಗೂ ರಾಜಕೀಯ ಶಕ್ತಿಗಳ ಹಲವು ಅಡೆತಡೆಗಳನ್ನು ಎದುರಿಸಿ ಪ್ರಕೃತಿಯ ಸುಂದರ ಪರಿಸರದಲ್ಲಿ ಉಡುಪಿ ಪೇಜಾವರ ಮಠದ ಪೂಜ್ಯ ಶ್ರೀಶ್ರೀಶ್ರೀ ವಿಶ್ವೇಶ್ವತೀರ್ಥ ಶ್ರೀ ಪಾದಂಗಳವರು ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ಮಾಡಿದ್ದರು. ಈ ಸಂದರ್ಭದಲ್ಲಿ ಪ್ರೌಢಶಾಲೆಯನ್ನು ಕಾರ್ಯಕ್ರಮಯು ನಡೆಯದಂತೆ ಮತೀಯ ರಾಜಕೀಯ ಒತ್ತಡಕ್ಕೆ ಮಣಿದು ಸರಕಾರವು ೧೪೪ನೇ ಸೆಕ್ಷನ್ ಜಾರಿಗೊಳಿಸಿದ್ದು, ಒಂದು ಕಹಿ ನೆನಪಾಗಿದೆ. ಕೊನೆಗೂ ಆಡಳಿತ ಮಂಡಳಿಯು ಯಶಸ್ವಿಯಾಗಿ ನಿವೇಶನವನ್ನು ಪಡೆದು ಪ್ರೌಢಶಾಲಾ ಕಟ್ಟಡವನ್ನು ನಿರ್ಮಿಸಿ ಗ್ರಾಮೀಣ ಪರಿಸರದ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣದ ಅನುಕೂಲವನ್ನು ಪೂರೈಸಿರುವುದು ಒಂದು ಇತಿಹಾಸ.

ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಸಿಗಬೇಕು ಆ ಮೂಲಕ ಸಮಾಜ ರಾಷ್ಟ್ರಕ್ಕೆ ಶಕ್ತಿಯಾಗಬೇಕು ಭಾರತಿಯ ಸಂಸ್ಕೃತಿಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಿಕ್ಷಣ ಮಕ್ಕಳಿಗೆ ಸಿಗಬೇಕು ಎಂಬುದನ್ನು ವಿದ್ಯಾಕೇಂದ್ರದ ಆಡಳಿತ ಮಂಡಳಿಯು ಮನಗಂಡು ೧೯೮೮ರಲ್ಲಿ ಶ್ರೀರಾಮ ಶಿಶುಮಂದಿರವನ್ನು ಪ್ರಾರಂಭಿಸಿತು. ಸ್ಥಳೀಯರ ಉತ್ತಮ ಪ್ರತಿಕ್ರಿಯೆಯೊಂದಿಗೆ ೧೯೮೯ರಲ್ಲಿ ಶ್ರೀರಾಮ ಪ್ರಾಥಮಿಕ ಶಾಲೆಯು ಆರಂಭಗೊಂಡಿತು.
ಹನುಮಾನ್ ನಗರದ ಪ್ರಕೃತಿಯ ಮಡಿಲಲ್ಲಿ ಗುರುಕುಲ ಮಾದರಿಯ ವಿಶಿಷ್ಟ ಕಟೀರಗಳಲ್ಲಿ ಶ್ರೀರಾಮ ಪ್ರಾಥಮಿಕ ಶಾಲೆಯು ತರಗತಿಗಳನ್ನು ನಡೆಸುತ್ತಿದೆ.  ಮಕ್ಕಳಿಗೆ ಆನಂದದಾಯಕ ಕಲಿಕೆಗೆ ಬೇಕಾದ ಪರಿಸರವನ್ನು ಒದಗಿಸಿವೆ. ಶಾಲಾ ಉದ್ಯಾನ ಸಹಿತ ಪ್ರಾಣಿ ಪಕ್ಷಿಗಳ ಒಡನಾಟವು ಮಕ್ಕಳಲ್ಲಿ ಜೈವಿಕ ಪರಿಸರದ ಸಂಬಂಧವನ್ನು ಬೆಸೆಯುವಂತೆ ಮಾಡಿದೆ.

ಇಲ್ಲಿ ತರಗತಿಯ ಕೊಠಡಿಗಳು ಮಹಾ ಪುರುಷರ ನಿತ್ಯ ಸ್ಮರಣೆಗೆ ಅನುಕೂಲವಾಗುವಂತೆ ಶಬರಿ, ಅಬ್ಬಕ್ಕ, ಬಾಹುಬಲಿ, ಶಿವಾಜಿ, ಶ್ರೀಕೃಷ್ಣ, ಶಾರದಾ, ಕೇಶವ, ಮಾಧವ, ಯಾದವ, ಈ ಹೆಸರುಗಳಿಂದ ಗುರುತಿಸಲಾಗುತ್ತಿದೆ. ತರಗತಿಗಳಲ್ಲಿ ಕುಟೀರದ ಪರಿಸರವು ಗುರುಕುಲದಂತಿದ್ದು ಇಲ್ಲಿ ಶ್ರೀಮಾನ್ ಹಾಗೂ ಮಾತಾಜಿಯವರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಾರೆ. ಪುರಾತನವಾಗಿದ್ದು ದೇವ ಭಾಷೆಯೆಂದು ಪರಿಗಣಿಸಲ್ಪಟ್ಟ ಸಂಸ್ಕೃತವನ್ನು ಎಲ್ಲಾ ಮಕ್ಕಳಿಗೆ ಕಲಿಯುವ ಅವಕಾಶವಿದೆ.

ಪ್ರತಿದಿನ ಸರಸ್ವತಿ ವಂದನೆಯೊಂದಿಗೆ ನಿತ್ಯ ಪ್ರಾರ್ಥನೆ ನಡೆಯುತ್ತದೆ. ಭಗವದ್ಗೀತೆ, ವೇದಗಳ ಮಂತ್ರೋಚ್ಚಾರಣೆ, ಸ್ತೋತ್ರಗಳು ಹಾಗೂ ಸೂಕ್ತಿಗಳು ನಿತ್ಯ ಪ್ರಾರ್ಥನೆಯಲ್ಲಿ ಹೇಳುವ ಮೂಲಕ ಮಕ್ಕಳಲ್ಲಿ ಉತ್ತಮ ಅಭ್ಯಾಸವನ್ನು ಮೈಗೂಡಿಸಿಕೊಳ್ಳುವಂತೆ ಮಾಡಲಾಗುತ್ತಿದೆ.

ರಾಷ್ಟ್ರಿಯ ಹಬ್ಬಗಳು ಮತ್ತು ಧಾರ್ಮಿಕ ಹಬ್ಬಗಳ ಆಚರಣೆಯ ಮೂಲಕ ಸಂಸ್ಕೃತಿ ಹಾಗೂ ಭಾವೈಕ್ಯವನ್ನು ಮಕ್ಕಳು ಬೆಳೆಸಿಕೊಳ್ಳುವುದಕ್ಕೆ ಅವಕಾಶವಾಗಿದೆ.

ವಿದ್ಯಾಕೇಂದ್ರವು ಸಾಮಾಜಿಕ ಪರಿವರ್ತನೆಯ ಮತ್ತು ಸಂಸ್ಕಾರದ ಕೇಂದ್ರವಾಗಿರಬೇಕೆಂಬುದು ವಿದ್ಯಾಕೇಂದ್ರದ ಸಂಸ್ಥಾಪಕರ ಆಶಯವಾಗಿದೆ. ಅಶನ, ಆರೋಗ್ಯ ಮತ್ತು ಶಿಕ್ಷಣ ಎಲ್ಲರಿಗೂ ಉಚಿತವಾಗಿ ಸಿಗಬೇಕು ಎಂಬ ಆರ್ಷೇಯ  ಚಿಂತನೆಯಂತೆ ವಿದ್ಯಾಕೇಂದ್ರವನ್ನು ನಡೆಸಿಕೊಂಡು ಬರಬೇಕೆಂದು ಆಡಳಿತ ಮಂಡಳಿಯ ದೂರದೃಷ್ಟಿಯಾಗಿದೆ. ಆ ಹಿನ್ನಲೆಯಲ್ಲಿ ಸಜ್ಜನರ ಸಹಕಾರ ಮತ್ತು ಕೊಡುಗೈ ದಾನಿಗಳ ಉದಾರತೆಯಿಂದ ಶಿಕ್ಷಣ ಸಂಸ್ಥೆಯು ವಿವಿಧ ಹಂತಗಳಲ್ಲಿ ವಿಸ್ತರಿಸಿಕೊಳ್ಳುತ್ತಿದೆ.

2006ರಲ್ಲಿ ಪದವಿ ಪೂರ್ವ ತರಗತಿಗಳು ಕಲಾ, ವಾಣಿಜ್ಯ, ವಿಜ್ಞಾನ ವಿಷಯಗಳೊಂದಿಗೆ ಆರಂಭಗೊಂಡಿದೆ.2009ರಲ್ಲಿ ಬಿ.ಬಿ.ಯಂ ಮತ್ತು ಬಿ.ಕಾಂ ಪದವಿ ತರಗತಿಗಳು ಆರಂಭಗೊಂಡಿವೆ.
ಸುಮಾರು 20ಎಕ್ರೆ ಪ್ರದೇಶದಲ್ಲಿ ವಿಶಾಲ ಆಟದ ಮೈದಾನ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಹಾಗೂ ಪದವಿ ತರಗತಿಳಿಗೆ ಪ್ರತ್ಯೇಕ ಕಟ್ಟಡಗಳು ಇವೆ. ವೇದವ್ಯಾಸ, ಮಧುಕರ, ಅಜಿತ ಸಭಾಂಗಣಗಳು ಸಾಮೂಹಿಕ ಪ್ರಾರ್ಥನೆ ಹಾಗೂ ಸಭೆ ಸಮಾರಂಭಗಳಿಗಾಗಿ ನಿರ್ಮಾಣವಾಗಿದೆ.