ರಾಷ್ಟ್ರೀಯ ವಿಚಾರ ಸಂಕಿರಣ 2023

ವಿದ್ಯಾಕೇಂದ್ರವು ಪ್ರತಿ ವರ್ಷವೂ ಹಮ್ಮಿಕೊಳ್ಳುವ ಕಾರ್ಯಕ್ರಮವಾದಂತಹ ರಾಷ್ಟ್ರೀಯ ವಿಚಾರ ಸಂಕಿರಣವು(11ನೇ) 2023ನೇ ವರ್ಷದಲ್ಲಿ ಜೂನ್ 20ರಂದು ಪದವಿ ವಿಭಾಗದ ಆಜಾದ್ ಭವನದಲ್ಲಿ ನಡೆಯಿತು. ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕರ್ನಾಟಕ ರಾಜ್ಯ ಹಾಗೂ ಆಸುಪಾಸಿನ ರಾಜ್ಯಗಳ ವಿದ್ಯಾಸಂಸ್ಥೆಗಳು ಪಾಲ್ಗೊಂಡು ದೇಶದ ಹಿತಚಿಂತನೆ ಕುರಿತಾಗಿ ಗೋಷ್ಠಿಗಳನ್ನು ನಡೆಸಲಾಗುವುದು. ಪ್ರಸ್ತುತ ವಿಚಾರ ಸಂಕಿರಣವು ” ಸ್ವತ್ವದ ಆಧಾರದ ಮೇಲೆ ಭಾರತದ ಪುನರುತ್ಥಾನ” ಎಂಬ ವಿಷಯದ ಕುರಿತಾಗಿದ್ದು ಒಟ್ಟು 59 ಸಂಸ್ಥೆಗಳಿಂದ 228 ಶಿಕ್ಷಕ ಪ್ರಾಧ್ಯಾಪಕ ವರ್ಗದವರು 485 ವಿದ್ಯಾರ್ಥಿಗಳು 167 ಇತರ ಪ್ರತಿನಿಧಿಗಳು ಸೇರಿ 880 ಮಂದಿ ಭಾಗವಹಿಸಿದ್ದರು. ತಾಂತ್ರಿಕ ಶಿಕ್ಷಣ, ಸ್ನಾತಕೋತ್ತರ ವಿಭಾಗ, ಆರೋಗ್ಯ ವಿವಿ, ಕಾನೂನು ವಿವಿ, ಕೇಂದ್ರೀಯ ವಿವಿ, ಸಂಸ್ಕೃತ ವಿವಿ, ಅಲ್ಲದೆ ಬಿಎಡ್, ಪಾಲಿಟೆಕ್ನಿಕ್, ಗುರುಕುಲ ಪ್ರೌಢಶಾಲೆ ಪದವಿಪೂರ್ವ ಕಾಲೇಜುಗಳ ಶಿಕ್ಷಕ ವರ್ಗದವರು ಭಾಗವಹಿಸಿದ್ದರು. ಮಂಗಳೂರು ,ಶಿವಮೊಗ್ಗ, ಮೈಸೂರು, ಬೆಂಗಳೂರು, ಕಣ್ಣೂರು ಹಾಗೂ 5 ಖಾಸಗಿ ವಿಶ್ವವಿದ್ಯಾಲಯಗಳು ಪ್ರತಿನಿಧಿಸಿದ್ದವು. ಉದ್ಘಾಟನೆ ಹಾಗೂ ಸಮಾರೋಪ ಸೇರಿ ಒಟ್ಟು 4 ಗೋಷ್ಠಿಗಳು ನಡೆದಿದ್ದು ಸುವರ್ಣ ನ್ಯೂಸ್ನ ಸುದ್ದಿ ವಿಭಾಗದ ಮುಖ್ಯಸ್ಥರಾದ ಅಜಿತ್ ಹನಮಕ್ಕನವರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಥಮ ಅವಧಿಯಲ್ಲಿ ಸ್ವತ್ವಯುತ ಭಾರತ ಒಂದು ವಿವೇಚನೆ ಎಂಬ ಕುರಿತು ವಿಚಾರ ಮಂಡನೆ ನಡೆಸಿದರು. ವಿದ್ಯಾಕೇಂದ್ರದ ಅಧ್ಯಕ್ಷರಾದ ಶ್ರೀ ನಾರಾಯಣ ಸೋಮಯಾಜಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾರಂಭದಲ್ಲಿ ಅಗ್ನಿಹೋತ್ರದ ಜೊತೆಗೆ ಸರಸ್ವತಿವಂದನೆ ನಡೆದ ಬಳಿಕ ತುಳಸಿ ಪೂಜೆಯೊಂದಿಗೆ ಕಾರ್ಯಕ್ರಮದ ಪ್ರಾರಂಭವಾಯಿತು. ನಂತರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯರಾದ ಡಾ. ಪ್ರಭಾಕರ ಭಟ್ ಅವರು ಪ್ರಸ್ತಾವನೆ ನಡೆಸಿದರು. ಪ್ರಾಚಾರ್ಯ ಕೃಷ್ಣಪ್ರಸಾದ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಎರಡನೇ ಅವಧಿಯಲ್ಲಿ ಪ್ರೊ. ಬಿ. ಎಂ ಕುಮಾರ ಸ್ವಾಮಿ, ವಿಶ್ರಾಂತ ಪ್ರಾಚಾರ್ಯರು ಶಿವಮೊಗ್ಗ ಅವರು “ಭಾರತೀಯ ಅಭಿವೃದ್ಧಿ ಮಾದರಿಗಳು” ಎಂಬ ವಿಷಯದ ಕುರಿತು ಮಾತನಾಡಿದರು. ಮೂರನೇ ಅವಧಿಯಲ್ಲಿ ಕ್ಯಾ. ಬ್ರಿಜೇಶ್ ಚೌಟ ಇವರು ಭಾರತೀಯ ಮಾದರಿಯ ಆಡಳಿತ ನಿರ್ವಹಣೆಯ ಕುರಿತು ವಿಚಾರ ಮಂಡಿಸಿದರು. ಕೊನೆಗೆ ಸಮಾರೋಪ ಸಮಾರಂಭದಲ್ಲಿ ಚಕ್ರವರ್ತಿ ಸೂಲಿಬೆಲೆ ಇವರು ವಿವೇಕಾನಂದರ ಚಿಂತನೆ ಕುರಿತು ರೋಮಾಂಚನಕಾರಿ ಯಾಗಿ ತಿಳಿಸಿದರು. ಅವಧಿಗಳ ಕೊನೆಗೆ ಪ್ರಶ್ನೋತ್ತರ ಸಂವಾದ ಹಾಗೂ ಕೊನೆಯಲ್ಲಿ ಅನಿಸಿಕೆ ವ್ಯಕ್ತ ಪಡಿಸುವ ಅವಕಾಶಗಳನ್ನು ಪ್ರತಿನಿಧಿಗಳಿಗೆ ನೀಡಲಾಗಿತ್ತು. ಪ್ರತಿ ಗೋಷ್ಠಿಯ ಕೊನೆಯಲ್ಲಿ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿನಿಧಿಗಳನ್ನು ಆರತಿ ಬೆಳಗಿ ಸ್ವಾಗತಿಸಿದ್ದು ಹಾಗೂ ಕಾಲೇಜಿನ ವಿದ್ಯಾರ್ಥಿ ತಂಡಗಳಿಂದ ದೇಶಭಕ್ತಿಗೀತೆಗಳ ಗಾಯನಗಳು ಕಾರ್ಯಕ್ರಮದ ವಿಶೇಷತೆಯನ್ನು ಹೆಚ್ಚಿಸಿದವು. ಕಾರ್ಯಕ್ರಮದಲ್ಲಿ ಕು. ಪದ್ಮಶ್ರೀ ವೈಯಕ್ತಿಕ ಗೀತೆ ಹಾಡಿದರು. ಕು. ಪ್ರತೀಕಾ, ಕು. ನವಿತಾ, ಕು. ಕೀರ್ತಿ, ಕು. ವಿಸ್ಮಿತಾ ಹಾಗೂ ಯತಿರಾಜ್ ಶ್ರೀಮಾನ್ ಇವರು ಕಾರ್ಯಕ್ರಮ ನಿರ್ವಹಿಸಿದರು. ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

Leave a Reply