ವೃಕ್ಷಾರೋಪಣದ ಚಿತ್ತ ಗ್ರಾಮದತ್ತ

ದಿನಾಂಕ 3.8.2019ರ ಶನಿವಾರದಂದು ಪರಿಸರ ಸಂರಕ್ಷಣಾ ಕಾಳಜಿಯನ್ನು ಗ್ರಾಮ ಮಟ್ಟದಿಂದಲೇ ಮೂಡಿಸುವ ನಿಟ್ಟಿನಲ್ಲಿ ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲಾ ವತಿಯಿಂದ ಮನೆ ಮನೆಯಲ್ಲಿ ಗಿಡ ನೆಡುವ ವೃಕ್ಷಾರೋಪಣ ಎಂಬ ವಿಶೇಷ ಅಭಿಯಾನವನ್ನು ಅಮ್ಟೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು. ಮನೆ-ಮನೆಯಲ್ಲಿ ವೃಕ್ಷ ಜಾಗೃತಿ ಮೂಡಿಸುವುದರೊಂದಿಗೆ ಊರಿನವರಲ್ಲಿಯೂ ಪರಿಸರ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಯಿತು.
ಶ್ರೀಕೃಷ್ಣ ಮಂದಿರ ಅಮ್ಟೂರು ಇಲ್ಲಿನ ಅಧ್ಯಕ್ಷರಾದ ರಮೇಶ್ ಕರಿಂಗಾಣ ಇವರು ಮಂದಿರದ ಮುಂಭಾಗದಲ್ಲಿ ಹಲಸಿನ ಗಿಡ ನೆಟ್ಟು ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು
ಅಶ್ವಥ್ಥಮೇಕಂ ಪಿಚುಮಂದುಮೇಕಮ್, ನ್ಯಗ್ರೋಧಮೇಕಂ ದಶತಿಂತ್ರಿಣೀಶ್ಚ, ಕಪಿತ್ಥಬಿಲ್ವಾಮಲಕಾಮ್ರವೃಕ್ಷಾನ್, ಧರ್ಮಾರ್ಥಮರೋಪ್ಯ ಸಯಾತಿ ನಾಕಂ ಎಂಬ ಪ್ರಸಿದ್ಧ ಶ್ಲೋಕದಂತೆ, ಒಂದು ಅರಳಿ ಮರ, ಬೇವಿನ ಮರ, ಆಲದ ಮರ, ಹತ್ತು ಹುಣಸೆಮರ ಸಾಕಷ್ಟು ಬೇವು, ಬಿಲ್ವ, ನೆಲ್ಲಿ ಮತ್ತು ಮಾವಿನ ಮರಗಳನ್ನು ಧರ್ಮಾರ್ಥಕ್ಕಾಗಿ ಬೆಳೆಸಿದಾತ ಸ್ವರ್ಗಕ್ಕೆ ಹೋಗುತ್ತಾನೆ ಎಂಬರ್ಥದಲ್ಲಿ ಪರಿಸರ ಸಂರಕ್ಷಣೆಗೆ ಗಿಡ ಮರಗಳನ್ನು ಸಾಧ್ಯವಾದಷ್ಟು ನೆಟ್ಟು ಬೆಳೆಸುವುದೇ ಪರಿಸರ ಸಂರಕ್ಷಣೆಗೆ ಉಳಿದಿರುವ ಪ್ರಮುಖ ಮಾರ್ಗವಾಗಿದೆ. ಈ ಚಿಂತನೆಯನ್ನು ವಿದ್ಯಾರ್ಥಿಗಳ ಮೂಲಕ ಮನೆ, ಮನೆಗಳಲ್ಲಿ ಬಿತ್ತುವ ಕಾರ್ಯ ನಿರಂತರವಾಗಿ ನಡೆಯಬೇಕಿದೆ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕರಾದ ರಮೇಶ್ ಎನ್ ಹೇಳಿದರು.
ಕಾಡುಗಳ ಕಣ್ಮರೆಯಿಂದ ಜೀವ ವೈವಿಧ್ಯತೆಯ ಅವಸಾನವಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮರಗಳು ನಾಶವಾಗುತ್ತಿದೆ. ಪ್ರಕೃತಿಯ ಸಮತೋಲನ ತಪ್ಪುತ್ತಿದೆ. ಮಳೆ ಪ್ರಮಾಣ ಕುಸಿಯುತ್ತಿದೆ. ಓಜೋನ್ ಪದರವೂ ಕ್ಷೀಣಿಸುತ್ತಿದೆ. ಇದರೊಂದಿಗೆ ಜಾಗತಿಕ ತಾಪಮಾನವೂ ಹೆಚ್ಚುತ್ತಿದೆ. ಪ್ರವಾಹದ ಭೀತಿಯೂ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿಯೂ ಮರದ ಮೇಲಿನ ಮಮಕಾರ ಕಡಿಮೆಯಾಗುತ್ತಿದೆ. ನಮ್ಮ ಅವಿವೇಕಿತನದಿಂದ ಜೀವರಕ್ಷಕ ಆಮ್ಲಜನಕ ನೀಡಿ ಕಾಪಾಡುವ ಮರ ಮರುಗುತ್ತಿರುವುದು ಛೇದಕರ ಸಂಗತಿ. ಆದುದರಿಂದ ಶ್ರೀರಾಮ ಶಾಲೆಯ ಅಧ್ಯಾಪಕರ ಒಂದು ಗುಂಪು, ಅಮ್ಟೂರು ಗ್ರಾಮದ ವಿಧ್ಯಾರ್ಥಿಗಳ ಮನೆಗೆ ಭೇಟಿಯಿತ್ತು ವೃಕ್ಷವನ್ನು ನೆಡುವ ಮೂಲಕ ಹೊಸತೊಂದು ಅಭಿಯಾನಕ್ಕೆ ಮುನ್ನುಡಿಯಿತ್ತರು.
ಶ್ರೀಕೃಷ್ಣ ಭಜನಾಮಂದಿರ, ಅಮ್ಟೂರು ಗ್ರಾಮದ ತಾರಬರಿಯಲ್ಲಿರುವ ಸ್ಮಶಾನ ಹಾಗೂ ಶಾಂತಿಪಲ್ಕೆಯ ಮಂದಿರ, ಹಾಗೂ ಶ್ರೀ ಶಾರದಾಂಬಾ ಭಜನಾಮಂದಿರ ಕೇಶವನಗರದ ಆವರಣದಲ್ಲಿ ಗಿಡನೆಡಲಾಯಿತು.
ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಯನ್ನು ಎಳೆಯಲ್ಲಿಯೇ ಮೂಡಿಸುವ ದೃಷ್ಟಿಯಿಂದ ವಿದ್ಯಾರ್ಥಿಗಳೇ ಗಿಡ ನೆಟ್ಟರು. ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಗಳನ್ನು ಆಯ್ಕೆಮಾಡಿ ಗಿಡನೆಡುವ ಅಭಿಯಾನ ಕೈಗೊಳ್ಳುವ ಚಿಂತನೆ ಕೈಗೊಂಡಿದೆ. ಈ ಮೂಲಕ ಗ್ರಾಮ ಹಾಗೂ ಶಾಲೆಯ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.ಎಂದು ಮಾಜಿ ತಾಲೂಕು ಪಂಚಾಯತ್‌ನ ಉಪಾಧ್ಯಕ್ಷರಾದ ದಿನೇಶ್ ಅಮ್ಟೂರು ಹೇಳಿದರು.
ಶಾಲಾ ಸಂಸತ್ತಿನ ಕೃಷಿಮಂತ್ರಿಯಾದ ಹೇಮಂತ್ ಸಿ.ಎಚ್ ಮಾತನಾಡಿ ಶಾಲೆಯಿಂದ ಪಕ್ಕದ ಗ್ರಾಮಕ್ಕೂ ಭೇಟಿಯಿತ್ತು, ಗಿಡ ನೆಟ್ಟಿರುವುದು ನನಗೂ ಹೆಮ್ಮೆಯ ವಿಚಾರವಾಗಿದೆ. ಮನೆಯಲ್ಲೂ ಗಿಡ ನೆಡುವ ಸಂಕಲ್ಪ ಮಾಡಿರುತ್ತೇನೆ.ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಗೋಪಾಲ್‌ಕೃಷ್ಣ ಪೂವಳ, ಜಯಂತ ಗೌಡ ಮಕ್ಕಾರ್, ಗೋಪಾಲ ಪೂಜಾರಿ, ಕೇಶವನಗರ ಭಜನಾ ಮಂದಿರದ ವಿಶ್ವನಾಥ ಪ್ರಭು, ಶ್ರೀರಾಮ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಸಾಲ್ಯಾನ್, ಕಾರ್ಯದರ್ಶಿಯಾದ ಜಯರಾಮ ರೈ ಶಾಲಾ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು, ಅಧ್ಯಾಪಕರಾದ ಕುಶಾಲಪ್ಪ ಅಮ್ಟೂರು, ರೇಷ್ಮಾ, ಸುಮಂತ್ ಆಳ್ವ, ನಾಗರಾಜು, ಚೈತ್ರಾ ಎನ್.ಕೆ ಹಾಗೂ ಪೋಷಕರು ಮಂದಿರದ ವಿವಿಧ ಪದಾಧಿಕಾರಿಗಳು, ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು ಉಪಸ್ಥಿತಿಯಿದ್ದರು 

Leave a Reply