ಮೌಲ್ಯಯುತ ಸಂಸ್ಕಾರಯಕ್ತ ಶಿಕ್ಷಣ-ಶ್ರೀರಾಮ ವಿದ್ಯಾಕೇಂದ್ರ

ಬಂಟ್ವಾಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕ ಪರಿಸರದಲ್ಲಿ ಶ್ರೀರಾಮ ವಿದ್ಯಾಕೇಂದ್ರವು ೧೯೮೦ರಲ್ಲಿ ಆರಂಭಗೊಂಡಿತು. ಕೇವಲ ೭೩ ವಿದ್ಯಾರ್ಥಿಗಳಿಂದ ಆರಂಭಗೊಂಡ ವಿದ್ಯಾಸಂಸ್ಥೆಯಲ್ಲಿ ಇಂದು ೩೦೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.

ಬಾಳ್ತಿಲ ಗ್ರಾಮದ ಹನುಮಾನ್ ನಗರದ ಪ್ರಶಾಂತ ಪರಿಸರದಲ್ಲಿ ವಿದ್ಯಾಕೇಂದ್ರವು ಶಿಶುಮಂದಿರದಿಂದ ಪದವಿ ತರಗತಿಗಳವರೆಗೆ ಪಠ್ಯದೊಂದಿಗೆ ಸಂಸ್ಕಾರಯುಕ್ತ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಗಳನ್ನು ಅರಳಿಸುವ ವಿವಿಧ ಚಟುವಟಿಕೆಗಳ ಮೂಲಕ ಜೀವನ ಮೌಲ್ಯ ಹಾಗೂ ರಾಷ್ಟ್ರೀಯ ಶಿಕ್ಷಣ ನೀಡುತ್ತಿದೆ. ವಿದ್ಯಾಕೇಂದ್ರವು ಶಾರೀರಿಕ, ಮಾನಸಿಕ, ಬೌದ್ಧಿಕವಾಗಿ ವಿಕಸಿತಗೊಂಡ ಯುವ ಪೀಳಿಗೆಯನ್ನು ನಿರ್ಮಾಣ ಮಾಡುವ ಧ್ಯೇಯೋದ್ದೇಶವನ್ನು ಹೊಂದಿದೆ.
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸುಸಜ್ಜಿತವಾದ ಕಟ್ಟಡಗಳು, ಉತ್ತಮ ಗ್ರಂಥಾಲಯ, ಪ್ರಯೋಗಾಲಯವನ್ನು ಹೊಂದಿದೆ. ವಿಶಾಲವಾದ ಕ್ರೀಡಾಂಗಣವನ್ನು ಹೊಂದಿದ್ದು ಕ್ರೀಡಾಪಟುಗಳಿಗೆ ವಿಶೇಷ ತರಬೇತಿ ಹಾಗೂ ಪ್ರೋತ್ಸಾಹ ನೀಡಲಾಗುತ್ತದೆ.

ಉಚಿತ ಶಿಕ್ಷಣ:
ಎಲ್ಲಾ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿಯೇ ಉತ್ತಮ ಶಿಕ್ಷಣ ನೀಡುವ ಹಿನ್ನಲೆಯಲ್ಲಿ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಲಾಗುತ್ತದೆ. ಮೌಲ್ಯಯುತ ಸಂಸ್ಕಾರಭರಿತ ಶಿಕ್ಷಣಕ್ಕೆ ಪೂರಕವಾಗಿ ಸ್ಮಾರ್ಟ್ ತರಗತಿಗಳು, ಪಠ್ಯಪುಸ್ತಕ ಮತ್ತು ಬರೆಯುವ ಪುಸ್ತಕಗಳು, ಗಣಕ ಶಿಕ್ಷಣ(ಕಂಪ್ಯೂಟರ್), ಸಮವಸ್ತ್ರ ವೈದ್ಯಕೀಯ ಪರೀಕ್ಷೆ, ಕ್ರೀಡಾ ತರಬೇತಿ, ಜ್ಞಾನವಿಜ್ಞಾನ ಚಟುವಟಿಕಗೆಳು, ಮಧ್ಯಾಹ್ನದ ಭೋಜನವನ್ನು ಉಚಿತವಾಗಿ ನೀಡಲಾಗುತ್ತಿದೆ.

ಕಲಿಕಾಪೂರಕ ಚಟುವಟಿಕೆಗಳು:
ಪ್ರಾಥಮಿಕ, ಪ್ರೌಢ, ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಧ್ಯಾನ, ಪ್ರಾಣಾಯಾಮಗಳ ಸಾಮೂಹಿಕ ಪ್ರಾರ್ಥನೆ ಸರಸ್ವತಿ ವಂದನೆಯಲ್ಲಿ ಪಾಲ್ಗೊಳ್ಳುತ್ತಾರೆ. ಯೋಗ ಮತ್ತು ನೈತಿಕ ಶಿಕ್ಷಣ, ಆಧ್ಯಾತ್ಮಿಕ ಶಿಕ್ಷಣವನ್ನು ವಿಶೇಷವಾಗಿ ನೀಡಲಾಗುತ್ತಿದ್ದು, ಸಂಗೀತ, ಭರತನಾಟ್ಯ, ಯಕ್ಷಗಾನ ತರಗತಿಗಳನ್ನು ಆಸಕ್ತಿಗೆ ಅನುಗುಣವಾಗಿ ನಡೆಸಲಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಘೋಷ್ ವಾದನ ತರಬೇತಿ ಹಾಗೂ ಸಾಮೂಹಿಕ ಪ್ರದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಸ್ಕೃತ ಸಂಭಾಷಣ ಶಿಬಿರ, ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್, ಸಾಹಿತ್ಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವ ಮೂಲಕ ಭಾಷಾ ಕೌಶಲ್ಯ ಬೆಳೆಸಲಾಗುತ್ತಿದೆ. ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ೧೮ ಸಂಘಗಳ ಮೂಲಕ ಪ್ರತಿಭೆಗಳನ್ನು ಗುರುತಿಸಿ ಚಟುವಟಿಕೆ ಹಾಗೂ ಕಾರ‍್ಯಕ್ರಮಗಳನ್ನು ನಡೆಸಲಾಗುವುದು.

ಶಿಶುಮಂದಿರ
ಶ್ರೀರಾಮ ಶಿಶುಮಂದಿರ ಪ್ರಾಥಮಿಕ ಪೂರ್ವ ಪುಟಾಣಿಗಳ ಚಟುವಟಿಕಾ ಕೇಂದ್ರ. ೩ವರ್ಷದಿಂದ ೬ ವರ್ಷದ ಮಕ್ಕಳ ಸರ್ವಾಂಗೀಣ ಬೆಳವಣಿಗೆಯನ್ನು ಗಮನಿಸಿ ಭಾರತೀಯ ಶಿಕ್ಷಣ ಪದ್ಧತಿಯನ್ನು ಅಳವಡಿಸಲಾಗಿದೆ.
೩ವರ್ಷದ ಸಂಸ್ಕಾರ ನೂರು ವರ್ಷದ ತನಕ ಎಂಬಂತೆ ಈ ಹಂತದಲ್ಲಿ ಮಕ್ಕಳಿಗೆ ರೂಢಿಯಾಗಬೇಕಾದ ಅಂಶಗಳನ್ನು ನಿತ್ಯ ಮೂಡಿಸುವುದು ಮತ್ತು ಮೆದುಳಿನ ಬೆಳವಣಿಗೆಗೆ ಪೂರಕವಾದ ಹಾಗೂ ಓದು, ಬರಹಕ್ಕೆ ಅಡಿಪಾಯವಾಗಿ ವಿವಿಧ ವೈಜ್ಞಾನಿಕ ಪದ್ದತಿಗಳನ್ನು ಅಳವಡಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತ ಭಾಷೆಯ ತಳಪಾಯವನ್ನು ಶಿಶುಮಂದಿರದಿಂದಲೇ ಆರಂಭಿಸಲಾಗಿದೆ.
ಅಪ್ಪ, ಅಮ್ಮ, ಹಿರಿಯರು, ರಾಷ್ಟ್ರ, ದೇವರನ್ನು ಗೌರವಿಸುವ, ನಿತ್ಯ ಮನೆಗಳಲ್ಲಿ ಮನೆ ಪರಿಸರದಲ್ಲಿ ನಡೆಯುವ ಚಟುವಟಿಕೆಗಳನ್ನು ಮಕ್ಕಳಿಗೆ ಪ್ರಾತ್ಯಕ್ಷಿಕೆ ಮೂಲಕ ರೂಢಿಗೊಳಿಸಲಾಗುವುದು. ಶಿಶು ಆಟಿಕೆಗಳು, ಈಜುಕೊಳ, ಉದ್ಯಾನದ ವ್ಯವಸ್ಥೆಯಿದ್ದು, ಮಕ್ಕಳು ಸ್ವತಂತ್ರವಾಗಿ ಆಲೋಚಿಸುವ, ಪರಿಸರ ಪ್ರೇಮಿಯಾಗಿ ಬೆಳೆಯುವ ಅವಕಾಶವನ್ನು ಕಲ್ಪಿಸಲಾಗಿದೆ.

ಪ್ರಾಥಮಿಕ ಶಿಕ್ಷಣ
ವಿದ್ಯಾಕೇಂದ್ರದ ಪರಿಸರದಲ್ಲಿ ೨೨ ಸುಂದರ ಕುಟೀರಗಳಲ್ಲಿ ಗುರುಕುಲ ಮಾದರಿಯ ಪ್ರಾಥಮಿಕ ಶಿಕ್ಷಣವನ್ನು ನಿಡಲಾಗುತ್ತಿದೆ. ಸಾವರ್ಕರ್, ಅಬ್ಬಕ್ಕ, ನೇತಾಜಿ, ಶಿವಾಜಿ ಮೊದಲಾದ ಹೆಸರುಗಳಿಂದ ತರಗತಿಗಳನ್ನು ಗುರುತಿಸಲಾಗಿದ್ದು, ರಾಷ್ಟ್ರೀಯ ಮಹಾಪುರುಷರ ಬಗ್ಗೆ ತಿಳಿ ಹೇಳಲಾಗುತ್ತದೆ. ಮಗುವಿನ ಅರಳುವ ಮನಸ್ಸಿಗೆ ಪೂರಕವಾಗಿ ಕಲಿ-ನಲಿ ಹಾಗೂ ಚೈತನ್ಯ ಪದ್ಧತಿಯನ್ನು ಅಳವಡಿಸಲಾಗಿದ್ದು, ವಿದ್ಯಾರ್ಥಿಗಳನ್ನು ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ. ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಗಮನ ಹಾಗೂ ತರಬೇತಿ ನೀಡಲಾಗುತ್ತದೆ. ಚಟುವಟಿಕಾಧಾರಿತ ಶಿಕ್ಷಣದ ಜೊತೆಗೆ ಮನೆಯಲ್ಲಿ ನೀಡಬೇಕಾದ ಬಾಲ್ಯದ ಮೌಲ್ಯಯುತ ಸಂಸ್ಕಾರಗಳನ್ನು ಶಾಲೆಯಲ್ಲಿ ನೀಡುತ್ತಿರುವುದು ಇಲ್ಲಿನ ವೈಶಿಷ್ಟ್ಯ. ೭೦೦ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಸುಂದರವಾದ ಪ್ರಕೃತಿ ಪರಿಸರದಲ್ಲಿ ಕಲಿಯುತ್ತಿದ್ದಾರೆ.

ಪ್ರೌಢ ಶಿಕ್ಷಣ:
ಶ್ರೀರಾಮ ಪ್ರೌಢಶಾಲೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡುತ್ತಿದ್ದು ರಾಜ್ಯಾದ್ಯಂತ ೮೫೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ೮ರಿಂದ ೧೦ನೇ ತರಗತಿಯವರೆಗೆ ಕಲಿಯುತ್ತಿದ್ದಾರೆ. ಹೊಸ ಶಿಕ್ಷಣ ಪದ್ಧತಿಯಂತೆ ಚಟುವಟಿಕಾಧಾರಿತ ಶಿಕ್ಷಣದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲಾಗುವುದು. ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ಕಲಿಯುವ ಅವಕಾಶವಿದ್ದು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ೩೩೦ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದು ಶೇ ೯೧ ಫಲಿತಾಂಶ ಬಂದಿರುತ್ತದೆ.

ಹೊನಲು ಬೆಳಕಿನ ಕ್ರೀಡೋತ್ಸವ
ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಊರವರಿಗೂ ಒಂದು ಹಬ್ಬ. ಗಣ್ಯಾತಿಗಣ್ಯರು, ಶಿಕ್ಷಣ ತಜ್ಞರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ವೈಶಿಷ್ಟಪೂರ್ಣ ಕಾರ‍್ಯಕ್ರಮ. ಶಾರೀರಿಕ ಪ್ರತಿಭೆಗಳನ್ನು ಶಿಶ್ತುಬದ್ಧವಾಗಿ, ಸಾಮೂಹಿಕವಾಗಿ ವಿವಿಧ ರಚನೆಗಳಲ್ಲಿ ಪ್ರಸ್ತುತ ಪಡಿಸುವುದೇ ಒಂದು ರಮ್ಯ ದೃಶ್ಯ ಸಂಗಮ. ಘೋಷ್, ಯೋಗಾಸನ, ಮಲ್ಲಕಂಬ, ಸ್ಕೇಟಿಂಗ್, ದೀಪಾರತಿ, ಜನಪದನೃತ್ಯ, ಕುಣಿತ ಭಜನೆ, ದ್ವಿಚಕ್ರ ವಾಹನ ಸಮತೋಲನ, ಹೀಗೆ ಹತ್ತು ಹಲವು ಪ್ರದರ್ಶನಗಳು ಶಿಶುಮಂದಿರ ಪುಟಾಣಿಗಳಿಂದ ಕಾಲೇಜು ವಿದ್ಯಾರ್ಥಿಗಳವರೆಗೆ ಸಂಯೋಜಿಸಲ್ಪಟ್ಟಿರುತ್ತದೆ. ಸುಮಾರು ಎರಡೂವರೆ ಗಂಟೆಗಳ ಪ್ರದರ್ಶನ ನೋಡುಗರನ್ನು ಮೈನವಿರೇಳಿಸುವಂತೆ ಮಾಡುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ರಾಷ್ಟ್ರಿಯ ಭಾವೈಕ್ಯತೆಯ ಸಂದೇಶ ನೀಡುವ ಮೂಲಕ ಸಾರ್ವಜನಿಕರನ್ನು ಭಾವಪರವಶರನ್ನಾಗಿಸುತ್ತದೆ ಎಂಬ ಮಾತು ಉತ್ಪೇಕ್ಷೆಯಾಗಲಾರದು.
ಕ್ರೀಡೋತ್ಸವ ಮತ್ತು ಪ್ರತಿಭಾ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು, ಹೊಂದಾಣಿಕೆ, ಶಾರೀರಿಕ ಕ್ಷಮತೆ, ಸಂಸ್ಕಾರ, ಸಹಕಾರ, ಹಾಗೂ ರಾಷ್ಟ್ರೀಯ ಚಿಂತನೆಯನ್ನು ಬೆಳೆಸುವ ಆಕಾಂಕ್ಷೆ ವಿದ್ಯಾಕೇಂದ್ರದ್ದಾಗಿರುತ್ತದೆ.
ಶ್ರೀರಾಮ ಪದವಿ ಪೂರ್ವ ಮತ್ತು ಪದವಿ ವಿದ್ಯಾಲಯ
ಪದವಿಪೂರ್ವ ತರಗತಿಗಳು ೨೦೦೫ರಿಂದ ಆರಂಭಗೊಂಡು ಕಲಾ, ವಾಣಿಜ್ಯ, ವಿಜ್ಞಾನ, ವಿಭಾಗವನ್ನು ವಿವಿಧ ಸಂಯೋಜನೆಗಳೊಂದಿಗೆ ಆರಂಭಿಸಲಾಗಿದೆ. ಶೈಕ್ಷಣಿಕವಾಗಿ ಕಳೆದ ಐದು ವರ್ಷಗಳಲ್ಲಿ ೧೦೦% ಫಲಿತಾಂಶ ದಾಖಲಾಗಿರುತ್ತದೆ. ೨೦೦೯ರಲ್ಲಿ ಪದವಿ ತರಗತಿಗಳು ಆರಂಭಗೊಂಡು ಬಿ.ಎ ಮತ್ತು ಬಿ.ಕಾಂ ತರಗತಿಗಳಲ್ಲಿ ಅತ್ಯುತ್ತಮ ಫಲಿತಾಂಶದ ಜೊತೆಗೆ ಸಮಾಜ ಚಿಂತನೆಯ ಯುವ ಪೀಳಿಗೆ ತಯಾರಾಗುತ್ತಿದೆ.
ವಿಶಾಲವಾದ ಬಹುಮಹಡಿ ಕಟ್ಟಡಗಳಲ್ಲಿ ಸುಸಜ್ಜಿತ ಕೊಠಡಿಗಳಿದ್ದು, ವಿವಿಧ ತರಗತಿಗಳನ್ನು ನುರಿತ ಶಿಕ್ಷಕರಿಂದ ನಡೆಸಲಾಗುತ್ತಿದೆ. ಅಜಿತ ಕುಮಾರ ಸಭಾಂಗಣದಲ್ಲಿ ನಿತ್ಯ ಧ್ಯಾನ ಹಾಗೂ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿದೆ. ಸುಸಜ್ಜಿತ ಗ್ರಂಥಾಲಯ, ವಿಶಾಲವಾದ ವಾಚನಾಲಯ, ಹಾಗೂ ದೃಶ್ಯ-ಶ್ರಾವ್ಯ ಕೊಠಡಿಗಳಿವೆ. ಕಾಲೇಜಿನ ಆವರಣದಲ್ಲಿಯೇ ಬಾಲಕ ಬಾಲಿಕೆಯರಿಗೆ ಪ್ರತ್ಯೇಕವಾದ ವಸತಿನಿಲಯಗಳ ವ್ಯವಸ್ಥೆಯಿದೆ.
ಶಾಲಾ ಹಾಗೂ ರಜಾ ದಿನಗಳಲ್ಲಿ ವಿಶೇಷ ಕೋಚಿಂಗ್ ತರಗತಿಗಳು ಹಾಗೂ ಪೂರಕ ತರಗತಿಗಳನ್ನು ನಡೆಸುವ ಮೂಲಕ ಪರೀಕ್ಷೆಗೆ ಸಿದ್ಧಗೊಳಿಸಲಾಗುವುದು. ವಿವಿಧ ಸ್ಪರ್ಧಾತ್ಮಕ ಚಟುವಟಿಕೆಗೆ ಸಿದ್ಧಗೊಳಿಸಲಾಗುವುದು.
ವಿದ್ಯಾಕೇಂದ್ರದ ವಿಶಾಲವಾದ ಕ್ರೀಡಾಂಗಣದಲ್ಲಿ ಕ್ರೀಡಾ ಸ್ಪರ್ಧೆಗೆ ಶಾರೀರಿಕ ನಿರ್ದೇಶಕರಿಂದ ಮಾರ್ಗದರ್ಶನ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ನಡೆಸಲಾಗುವುದು. ಅಭಿರುಚಿಗೆ ತಕ್ಕಂತೆ ವಿವಿಧ ಸಂಘಗಳಲ್ಲಿ ವಿದ್ಯಾರ್ಥಿಗಳನ್ನು ಜೋಡಿಸಲಾಗುತ್ತದೆ. ಯುವ ಮನಸ್ಸುಗಳಲ್ಲಿ ರಾಷ್ಟ್ರೀಯ ಭಾವ ಜಾಗೃತಿಗಾಗಿ ವಿಚಾರ ಸಂಕಿರಣಗಳನ್ನು ಪ್ರತೀ ವರ್ಷ ಆಯೋಜಿಸಲಾಗುತ್ತಿದೆ.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪ್ರೋತ್ಸಾಹ ಧನ ನೀಡಲಾಗುವುದು. ಎಲ್ಲಾ ವಿದ್ಯಾರ್ಥಿಗಳಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ. ಭಾರತದರ್ಶನ ಕಾರ‍್ಯಕ್ರಮಕ್ಕೆ ಪೂರಕವಾಗಿ ದೇಶದ ವಿವಿಧ ಸ್ಥಳಗಳಿಗೆ ಶೈಕ್ಷಣಿಕ ಪ್ರವಾಸ ಸಂಯೋಜಿಸಲಾಗುತ್ತದೆ. ಶೇ ೯೦ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಇದೆ.
ಶ್ರೀರಾಮ ವಿದ್ಯಾಕೇಂದ್ರ ಸಂಚಾಲಕ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರ ಮಾರ್ಗದರ್ಶನದಲ್ಲಿ ವಿದ್ಯಾಕೇಂದ್ರವು ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ವಿದ್ಯಾಕೇಂದ್ರವು ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಸೀಮಿತವಾಗದೆ ಸಾಮಾಜಿಕ ಪರಿವರ್ತನೆ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಊರ ಹಾಗೂ ಪರವೂರ ಶಿಕ್ಷಣಾಭಿಮಾನಿಗಳ ಮತ್ತು ರಾಷ್ಟ್ರಾಭಿಮಾನಿಗಳ ಸಹಕಾರದೊಂದಿಗೆ ಆಡಳಿತ ಮಂಡಳಿಯ ಅವಿರತ ಶ್ರಮದಿಂದ ಸಂಸ್ಥೆಯು ಉತ್ತಮ ಹೆಸರುಗಳಿಸಿದೆ. ವಿದ್ಯಾರ್ಜನೆಗೆ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಧ್ಯೇಯಾಧರಿತ ಶಿಕ್ಷಣ ಮತ್ತು ರಾಷ್ಟ್ರಾಭಿಮಾನ ಮೂಡಿಸುವ ಶಿಕ್ಷಣ ಪದ್ಧತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದೆ.

 

 

Leave a Reply