ಕಲ್ಲಡ್ಕ: ದಶಂಬರ ೮ : ’ವಸುಧಾರಾ’ ಗೋಶಾಲೆ ಲೋಕಾರ್ಪಣೆ – ಗೋವು ದೇಶದ ಪ್ರಾಣಿಯಲ್ಲ ದೇಶದ ಪ್ರಾಣ
ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳು ಶ್ರೀರಾಮಚಂದ್ರಾಪುರ ಮಠ, ಹೊಸನಗರ ಇವರು ಗೋ-ಶಾಲೆಯ ಮುಂಭಾಗದಲ್ಲಿರುವ ಕೃಷ್ಣನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, ಗೋವುಗಳಿಗೆ ಗೋಗ್ರಾಸ ನೀಡಿದರು. ನಂತರ ನಾಮಪಲಕದ ಪರದೆಯನ್ನು ಸರಿಸುವ ಮೂಲಕ ಗೋಶಾಲೆಯನ್ನು ಲೋಕಾರ್ಪಣೆಗೊಳಿಸಿದರು.
ಬಿಸಿಲನ್ನು ಲೆಕ್ಕಿಸದೇ ಕುಳಿತಿರುವ ವಿದ್ಯಾರ್ಥಿಗಳನ್ನು ಕಂಡು ಮುಂದಿನ ಜೀವನದಲ್ಲಿ ತುಂಬಾ ಬಿಸಿಲು ಇರುವುದು. ಆ ಬಿಸಿಲನ್ನು ಎದುರಿಸಿ ಗೆಲ್ಲುವ ಶಕ್ತಿಗೆ ನಾವು ಈಗಾಗಲೇ ಸಿದ್ದರಾಗಬೇಕು. ಕಲ್ಲಡ್ಕದ ವಿದ್ಯಾರ್ಥಿಗಳು ಸಿದ್ದರಾದಷ್ಟು ಬೇರೆ ಯಾರೂ ಸಿದ್ದರಾಗಿಲ್ಲ ಎಂದರು. ನಿಮ್ಮ ಜೀವನದ ಬಿಸಿಲು ಮಾತ್ರವಲ್ಲ ದೇಶದ ಬಿಸಿಲನ್ನು ಎದುರಿಸಬೇಕು. ದೇಶವನ್ನು ಒಳಗಿನಿಂದ ಹಾಗೂ ಹೊರಗಿನಿಂದಲೂ ನಾಶ ಮಾಡಲೂ ಪ್ರಯತ್ನಿಸುತ್ತಿರುವವರ ವಿರುದ್ದ ಸಿದ್ದರಾಗಬೇಕು. ಗೋವು ಪ್ರಾಣಿಯಲ್ಲ ಅದು ದೇಶದ ಪ್ರಾಣ. ಗೋವು ಮಾತೆಯಾಗಿದ್ದಾಗ ಆಗಿದ್ದಾಗ ದೇಶ ಸಂಪದ್ಭರಿತವಾಗಿತ್ತು. ಗೋವಿನಲ್ಲಿ ೩೩ ಕೋಟಿ ದೇವತೆಗಳು ಇರುವುದು. ಎಲ್ಲ ದೇವಸ್ಥಾನಕ್ಕಿಂತ ದೊಡ್ಡ ದೇವಸ್ಥಾನ ಗೋಶಾಲೆ ಎಂದು ತಿಳಿಸಿದರು. ದೇವಸ್ಥಾನ ಮನುಷ್ಯ ಸೃಷ್ಟಿ ಆದರೆ ಇದು ದೈವಸೃಷ್ಟಿ ಎಂದರು. ಗೋವಿಗೆ ಗೋಗ್ರಾಸ ನೀಡಿದರೆ ಅದು ಯಜ್ಞ ಗೋವಿನಿಂದ ನಾವು ಪಡೆಯುವುದೇ ಅದು ಅಮೃತ ಎಂದು ಪೂಜ್ಯ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಸಂಸ್ಥೆಯ ಹಿರಿಯ ಮಾರ್ಗದರ್ಶಿಗಳು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಮ್ಮ ಸಂಸ್ಥೆ ೩೬ ವರ್ಷಗಳಿಂದ ನಮ್ಮ ಧರ್ಮ, ಸಂಸ್ಕೃತಿ, ಜೀವನ ಮೌಲ್ಯಗಳನ್ನು ನೀಡುವ ಉತ್ತಮ ಶಿಕ್ಷಣ ನೀಡುತ್ತಾ ಬಂದಿದೆ. ಅದರ ಜೊತೆಗೆ ಗೋವಿನ ಸಂಸ್ಕೃತಿಯು ಸೇರಿಕೊಂಡಿದೆ. ಅನಾದಿಕಾಲದಿಂದಲೂ ನಮ್ಮ ರಾಷ್ಟ್ರೀಯ ಪ್ರಾಣಿ ಗೋವು ಆಗಿತ್ತು. ಮಾತ್ರವಲ್ಲದೆ ಗೋವಿನ ತರವೇ ಜೀವನವೂ ಆಗಿತ್ತು ಆದರೆ ಪರಕೀಯರ ಆಕ್ರಮಣದಿಂದ ಗೋವಿನಿಂದ ಹುಲಿಯ ಸಂಸ್ಕೃತಿಗೆ ಹೋಗಿದ್ದೇವೆ. ಆದರೆ ನಮ್ಮ ವಿದ್ಯಾರ್ಥಿಗಳು ಗೋ-ಮಾತೆಯನ್ನು ಮುಟ್ಟಬೇಕು, ಗೋಮಾತೆಯ ವಾತಾವರಣದಲ್ಲಿರಬೇಕು ಎಂಬ ಉದ್ದೇಶ ಇಟ್ಟುಕೊಂಡು ಈ ಗೋ-ಶಾಲೆಯನ್ನು ಪ್ರಾರಂಬಿಸಿದ್ದೇವೆ ಎಂದರು.
ವೇದಿಕೆಯಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಉಪಸ್ಥಿತರಿದ್ದರು. ವಿದ್ಯಾಕೇಂದ್ರದ ಸಂಚಾಲಕರು ವಸಂತ ಮಾಧವ ಸ್ವಾಗತಿಸಿ, ಪೂಜ್ಯ ಸ್ವಾಮೀಜಿಯವರಿಗೆ ಗೊ-ಶಾಲೆಯ ಇಂಜಿನಿಯರ್ ಸಂಸ್ಥೆಯ ಹಿರಿಯ ವಿದ್ಯಾರ್ಥಿ ರಾಮಪ್ರಸಾದ್ ದಂಪತಿ ಫಲಪುಷ್ಪ ನೀಡಿ ಸ್ವಾಗತಿಸಿದರು. ವಿದ್ಯಾಕೇಂದ್ರದ ಕೋಶಾಧಿಕಾರಿ ಸತೀಶ್ ಭಟ್ ಶಿವಗಿರಿ ಧನ್ಯವಾದವಿತ್ತು, ಉಪನ್ಯಾಸಕ ಯತಿರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.
ರಾಮ ದಂಪತಿಗಳು ಪೂಜ್ಯ ಸ್ವಾಮೀಜಿಯವರು ಸಂಸ್ಥೆಗೆ ಆಗಮಿಸಿದಾಗ ಅವರಿಗೆ ತುಳಸಿ ಮಾಲೆ ಹಾಕಿ ಪಾದಪೂಜೆ ಮಾಡಿ, ಶಿಶುಮಂದಿರದ ಪೋಷಕ ಮಾತೆಯರು ಪೂರ್ಣಕುಂಭ ಸ್ವಾಗತ ಮಾಡಿದರು. ನಂತರ ಪೂಜ್ಯ ಸ್ವಾಮೀಜಿಯವರು ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಚಟುವಟಿಕೆಯನ್ನು ವೀಕ್ಷಿಸಿದರು.