ದಶಮಾನೋತ್ಸವದ ಉದ್ಘಾಟನೆ ಮತ್ತು ಪದವಿ ವಿದ್ಯಾರ್ಥಿಗಳ ಪ್ರವೇಶೋತ್ಸವ

ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳಾದಾಗ ಒಪ್ಪಿಕೊಳ್ಳುವ ಮನೋಸ್ಥಿತಿ ನಿರ್ಮಾಣವಾಗಬೇಕು ಆಗ ಶಿಕ್ಷಣ ದೃಢವಾಗುತ್ತದೆ ಎಂದು ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ದಶಮಾನೋತ್ಸವ ಕಾರ್ಯಕ್ರಮ ಉದ್ಘ್ಘಾಟಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಇವರು ಮಾತನಾಡಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ೨೧೦ ಕಾಲೇಜುಗಳಲ್ಲಿ ರಾಷ್ಟ್ರಾಭಿಮಾನ, ಸಂಸ್ಕಾರ, ಸಂಸ್ಕೃತಿಯನ್ನು ಬಿಂಬಿಸುವ ಶ್ರೀರಾಮ ಕಾಲೇಜಿಗೆ ವಿಶೇಷ ಸ್ಥಾನಮಾನ. ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬಲ್ಲ ಮಾನಸಿಕ ಶಾರೀರಿಕ, ಬೌದ್ಧಿಕ, ಸಾಮಾಜಿಕ ಆಧ್ಯಾತ್ಮಿಕ ೫ ಆಯಾಮಗಳ ಮೂಲಕವೇ ಇಲ್ಲಿ ಶಿಕ್ಷಣವನ್ನು ನೀಡುತ್ತಿರುವುದು ವಿಶೇಷ ಎಂದರು. .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ಸಮಾಜದ ಸಚ್ಚಾರಿತ್ಯವನ್ನು ಉಳಿಸುವ ನಿಟ್ಟಿನಲ್ಲಿ, ದೇಶದ ಗರಿಮೆ, ಹಿರಿಮೆ, ಸಂಸ್ಕಾರ, ಸಂಸ್ಕೃತಿಯನ್ನು ಶಿಕ್ಷಣದ ಜೊತೆಗೆ ಎತ್ತಿ ಹಿಡಿಯುವ ವಿದ್ಯಾ ಸಂಸ್ಥೆಗಳ ಅವಶ್ಯಕತೆ ಇದ್ದು ನಮ್ಮ ಸಂಸ್ಥೆಯು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಎನ್. ಎಂ. ಪಿ. ಟಿ. ಅಧ್ಯಕ್ಷರಾದ ಎ. ವೆಂಕಟರಮಣ ಅಕ್ಕರಾಜು ಇವರು ಜೀವನ ಮೌಲ್ಯಗಳನ್ನು ಕಲಿಸುವ ನಮ್ಮ ಸಂಸೃತಿ ರಾಮಾಯಣ, ಪುರಾಣಗಳನ್ನು ಕಲಿಸಲು ಹಿಂಜರಿಯುತ್ತಿರುವ ಈ ಕಾಲದಲ್ಲಿ ಈ ಶಿಕ್ಷಣ ಸಂಸ್ಥೆಯು ಮಾದರಿಯಾಗಿದ್ದು, ಮುಂದೊಂದು ದಿನ ಸ್ವರ್ಣ ಭಾರತವನ್ನು ಕಾಣುವ ಭರವಸೆ ಇದೆ ಎಂದರು. ಆರ್.ಟಿ ಐ ಕಮೀಷನರ್ ಸಂತೋಷ್. ಯಲ್. ಪಾಟೀಲ್ ಅಗ್ನಿ ಹೋತ್ರದ ಮೂಲಕ ಪ್ರವೇಶೋತ್ಸವಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಬೆಳಗಾವಿ, ಕುಡಚಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರಾಜೀವ ಮಾತನಾಡಿ ವಿದ್ಯಾರ್ಥಿಯ ವಿದ್ಯಾಭ್ಯಾಸವು ಭರತಮಾತೆಗೆ ಮುಡಿಪಾಗಿರಲಿ ಎಂದರು. ಚಲನ ಚಿತ್ರೋದ್ಯಮದ ಖ್ಯಾತ ನಿರ್ಮಾಪಕ ಟಿ. ಆರ್. ಚಂದ್ರಶೇಖರ ಇವರು ವಿದ್ಯೆಯೆಂಬುದು ಬರೀ ಸಾಕ್ಷರತೆಯಲ್ಲ, ದೈವತ್ವಕ್ಕೆ ಏರಿಸುವಂತಹುದು. ಇಲ್ಲಿ ಸಿಗುವ ಶಿಕ್ಷಣ ದೇಶದ ಮೂಲೆಮೂಲೆಗಳಿಗೂ ಪಸರಿಸಲಿ ಎಂದಾಶಿಸಿದರು. ದಶಮಾನೋತ್ಸವ ಸ್ಮರಣಾರ್ಥವಾಗಿ ತೆಂಗಿನ ಸಸಿಯನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ಪ್ರಕಾಶ್ ಭಟ್, ಪ್ಯಾರಾ ಒಲಂಪಿಕ್ ಸ್ವರ್ಣಪದಕ ವಿಜೇತ ನಯಮತ್ತುಲ್ಲಾ ಖಾನ್, ಮುನೀಶ್ ಕುಮಾರ್, ಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್ ಎನ್, ರಾಷ್ಟ್ರ ಸೇವಿಕಾ ಸಮಿತಿ ದಕ್ಷಿಣ ಪ್ರಾಂತ ಕಾರ್ಯ ಕಾರಿಣಿ ಸದಸ್ಯೆ ಕಮಲಾ ಪ್ರಭಾಕರ ಭಟ್ ಉಪಸ್ಥಿತರಿದ್ದರು. ಬಂಕಿಮ ಚಂದ್ರ ಚಟರ್ಜಿಯವರ ಜನ್ಮದಿನದ ಅಂಗವಾಗಿ ಹಿರಿಯ ವಿದ್ಯಾರ್ಥಿನಿ ವಿದ್ಯಾಶ್ರೀ ವಂದೇ ಮಾತರಂ ಹಾಡಿದರು.
ಈ ಸಂದರ್ಭದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ತಿಲಕಧಾರಣೆ ಮಾಡಲಾಯಿತು. ಬಳಿಕ ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ, ಅಗ್ನಿಗೆ ಹವಿಸ್ಸನ್ನು ಅರ್ಪಿಸಿದರು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಪರಿಚಯಿಸಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸಾಕ್ಷ್ಯ ವಂದಿಸಿ, ಭವಾನಿ ಕಾರ್ಯಕ್ರಮ ನಿರೂಪಿಸಿದರು.

Posted by Sri Rama Vidyakendra Trust, Kalladka on Thursday, June 27, 2019

 

Leave a Reply