ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ. ಭೈರಪ್ಪರವರು ವಿದ್ಯಾಕೇಂದ್ರಕ್ಕೆ ಬೇಟಿ

ವಿದ್ಯಾ ಕಾಶಿಯಾದ ದಕ್ಷಿಣ ಕನ್ನಡ
ತೀರ್ಥಕ್ಷೇತ್ರಕ್ಕೆ ಪ್ರಸಿದ್ಧಿಯಾದ ದಕ್ಷಿಣಕನ್ನಡ ಇಂದು ವಿದ್ಯಾ ಕಾಶಿಯಾಗಿದೆ. ಶಿಕ್ಷಣದ ದೇಗುಲವಾಗಿದೆ. ಅಂತಹ ದಕ್ಷಿಣ ಕನ್ನಡ ಜಿಲ್ಲೆ ಪುಣ್ಯದ ನಾಡು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ. ಭೈರಪ್ಪ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಸಂತಸದ ನುಡಿಗಳನ್ನಾಡಿ, ವಿದ್ಯಾಸಂಸ್ಥೆಯಲ್ಲಿ ವಾರ್ಷಿಕವಾಗಿ ನಡೆಯುವ ಕ್ರೀಡೋತ್ಸವದ ಬಗ್ಗೆ ಉಲ್ಲೇಖಿಸುತ್ತಾ, ಶಿಶು ಶಿಕ್ಷಣದಿಂದಲೇ ಸಂಸ್ಕೃತಿ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಶಿಕ್ಷಣ ನೀಡುತ್ತಿರುವುದು ಅಮೋಘ ಸಂಗತಿ ಎಂದರು.
ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಸಂಸ್ಥೆಯು ಯಾವತ್ತೋ ವಾಣಿಜ್ಯ ನಗರಿಯಾಗಿ ಬೆಳೆಯಬಹುದಿತ್ತು ಆದರೆ ಅದಕ್ಕೆ ಮಾರುಹೋಗದೆ ತನ್ನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಮುಂದುವರಿಯುತ್ತ ಇರುವುದು ಪ್ರಶಂಸನೀಯ ವಿಚಾರ ಎಂದರು.
ಅಮೇರಿಕನ್ನರು ಬಯಸುತ್ತಿರುವುದು ಶಿಸ್ತಿನ ಶಿಕ್ಷಣವನ್ನೇ. ಅಂತೆಯೇ ಇಲ್ಲಿ ದೊರೆಯುತ್ತಿರುವ ಶಿಕ್ಷಣ ಶಿಸ್ತಿನ ಜೊತೆಗೆ ಆಚಾರವನ್ನು ನೀಡುವ ಶಿಸ್ತುಬದ್ಧವಾದ ಶಿಕ್ಷಣವಾಗಿದೆ. ಉತ್ತಮ ಶಿಕ್ಷಣ ನೀಡುವುದರಿಂದ ಕೈಯಲ್ಲಿ ಗುಂಡು, ಪಿಸ್ತೂಲು, ಕೋವಿ ಹಿಡಿಯುವುದು ತಪ್ಪುತ್ತದೆ. ಅದಕ್ಕೆ ಬಾಲ್ಯತನದಿಂದಲೇ ಶಿಸ್ತಿನ ಶಿಕ್ಷಣ ನೀಡುವುದು ಉತ್ತಮ ಎಂದರು.
ಅನೇಕ ಮಹನೀಯರಿಂದ ದಕ್ಷಿಣಕನ್ನಡ ಜಿಲ್ಲೆವೊಂದು ಶಿಕ್ಷಣದ ಕೇಂದ್ರವಾಗಿದೆ. ಖ್ಯಾತಿಯಲ್ಲಿ ಎಲ್ಲ ರಾಷ್ಟ್ರಕ್ಕಿಂತ ಭಾರತವೇ ಶ್ರೇಷ್ಟ ರಾಷ್ಟ್ರ. ಈ ಸಂದರ್ಭದಲ್ಲಿ ಖ್ಯಾತಿಯ ನಳಂದಾ, ತಕ್ಷಶಿಲಾ ವಿಶ್ವವಿದ್ಯಾನಿಲಯಗಳನ್ನು ನೆನಪಿಸಿಕೊಂಡರು. ಇಟಲಿಯ, ಗ್ರೀಕ್ ಮಹಾನ್ ಕವಿಗಳ ವರ್ಣನೆಯನ್ನು ನೆನಪಿಸುತ್ತಾ ಪ್ರಪಂಚದಲ್ಲಿ ಸ್ವರ್ಗ ಎಲ್ಲಿದೆ ಎಂದರೆ ಅದು ಭಾರತದಲ್ಲಿದೆ ಎಂದು ಬಣ್ಣಿಸಿ ಅಂತಹ ದಿನ ಮತ್ತೆ ಮರುಕಳಿಸುವುದು ಖಂಡಿತ . ಈ ವಿಶ್ವಕ್ಕೆ ಭಾರತ ಮಾದರಿ ದೇಶವಾಗುವುದು ಎಂದರು.
ಸಂಸ್ಥೆಯ ಸಂಚಾಲಕರಾದ ಡಾ ಪ್ರಭಾಕರ ಭಟ್ ಮಾತನಾಡಿ, ಭಾರತದಿಂದ ಜಗತ್ತಿಗೆ ಕೊಡುವಂತಹ ನಾಡು ನಮ್ಮದಾಗಬೇಕು, ಎಲ್ಲದರಲ್ಲಿಯೂ ಶ್ರೇಷ್ಟವಾದ ಸಂಸ್ಕೃತಿ, ಆಚಾರ, ವಿಚಾರ ನೀಡುವ ಶಿಕ್ಷಣ ನಮ್ಮಲ್ಲಿದೆ. ನಮ್ಮ ಮನಸ್ಸಿನಲ್ಲಿ ಜಗತ್ತಿಗೆ ಏನಾದರೂ ಕೊಡುವಂತಹ ದೃಷ್ಟಿಕೋನವಿರಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಸ್ವಾಗತಿಸಿ ಪರಿಚಯಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ದೈನಂದಿನ ಪ್ರಾರ್ಥನೆ, ಸರಸ್ವತಿ ವಂದನೆ, ಹಾಗೂ ವಿವಿಧ ಗೀತೆಗಳನ್ನು ಹಾಡಲಾಯಿತು

Leave a Reply