ದಿನಾಂಕ 26.07.2019ರ ಶುಕ್ರವಾರದಂದು ಕಾರ್ಗಿಲ್ ವಿಜಯೋತ್ಸವದ 20ನೇ ವರುಷದ ಸಂಭ್ರಮವನ್ನು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವೀರ ಯೋಧರ ಪೋಷಕರನ್ನು ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಗಿಲ್ ಯುದ್ಧವು ನಡೆದು ಇಂದಿಗೆ 20 ವರ್ಷ ಸಂದರೂ ಅದರ ನೆನಪು ಭಾರತೀಯರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಇದೇ ದಿವಸ ಸರಿಯಾಗಿ ೨೦ ವರುಷಗಳ ಹಿಂದೆ ಅಂದರೆ ೨೬ ಜುಲೈ ೧೯೯೯ ರಂದು ಭಾರತೀಯ ಸೇನೆಯು ಪಾಕಿಸ್ತಾನದ ಹಿಡಿತದಲ್ಲಿ ಇದ್ದ ಕಾರ್ಗಿಲ್ನ ಎಲ್ಲಾ ಕ್ಷೇತ್ರಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಆದ್ದರಿಂದ ಪ್ರತೀ ವರ್ಷ ಜುಲೈ 26ನೇ ದಿನವನ್ನು ಕಾರ್ಗಿಲ್ ವಿಜಯೋತ್ಸವವೆಂದು ಆಚರಿಸುತ್ತೇವೆ.
ದೇಶದ ೧೩೦ ಕೋಟಿ ಜನತೆಯ ರಕ್ಷಣೆಗೆ ಗಡಿಯಲ್ಲಿ ದೇಶವನ್ನು ಕಾಯುವ ಯೋಧರಿಗೆ ನಮನ ಸಲ್ಲಿಸುತ್ತೇನೆ. ಸಿಂಹ ಸದೃಶವಾದ ಧೈರ್ಯ, ಶೌರ್ಯಕ್ಕೆ ಹೆಸರಾದ ಭರತನ ಹೆಸರಲ್ಲಿ ನಮ್ಮ ಭಾರತ ದೇಶವಿದೆ. ಚಂದ್ರಗುಪ್ತ, ಚಾಣಕ್ಯ, ಶಿವಾಜಿಯಂತಹ ಮೇಧಾವಿಗಳನ್ನು ಕೊಟ್ಟಂತಹ ದೇಶ ನಮ್ಮದು. ನಮ್ಮ ದೇಶದ ವೀರಯೋಧರ ಬಲಿದಾನವನ್ನು ಸ್ಮರಿಸುವಂತಹ ಕಾರ್ಯ ನಿರಂತರವಾಗಿ ನಡೆಯಬೇಕು. ಝಾನ್ಸಿ ರಾಣಿ, ಅಬ್ಬಕ್ಕ ಎಲ್ಲ ಯೋಧರಿಗೂ ಮಾರ್ಗದರ್ಶಕವಾಗಿದ್ದಾರೆ, ಹೆಣ್ಣು ಎನ್ನುವುದು ದೇಶ ರಕ್ಷಣೆಯ ಪ್ರತೀಕ. ಪ್ರತಿಯೊಬ್ಬ ತಾಯಂದಿರೂ ಕೂಡ ದೇಶಕಾಯುವ ವೀರಯೋಧರ ಹಿಂದಿರುವ ಶಕ್ತಿ. ಇಂತಹ ದೇಶಭಕ್ತಿ ಸರ್ವಸಾಮ್ಯಾರಲ್ಲಿಯೂ ಜಾಗೃತಗೊಳ್ಳಬೇಕಾಗಿರುವುದು ಇಂದಿನ ಆದ್ಯತೆಯಲ್ಲಿ ಒಂದಾಗಿದೆ.ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅದ್ಯಕ್ಷರಾದ ಡಾ||ಪ್ರಭಾಕರ್ ಭಟ್ ಕಲ್ಲಡ್ಕ ನುಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ತಾಂಬೂಲ ನೀಡಿ ಸ್ವಾಗತಿಸಲಾಯಿತು. ನಂತರ ಯೋಧರಿಗೆ ಹಾಗೂ ಸಕುಟುಂಬದವರಿಗೆ ಅಧ್ಯಾಪಕ ವೃಂದದವರು ಆರತಿ ಬೆಳಗಿ, ತಿಲಕ ಇಟ್ಟು ,ರವಿಕೆ ಕಣದೊಂದಿಗೆ ಬಳೆಯನ್ನು ನೀಡಲಾಯಿತು. ಡಾ|| ಕಮಲಾ ಪ್ರಭಾಕರ್ ಭಟ್ ದಂಪತಿಗಳು ಶಾಲು ಹೊದಿಸಿ ಗೌರವಾರ್ಪಿಸಿದರು. ವಿದ್ಯಾರ್ಥಿನಿಯರು ದೇಶಭಕ್ತಿಗೀತೆ ಹಾಡಿದರು.
ಸುಮಾರು ೨೦ವರುಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ವಿಠ್ಠಲ್ ಶೆಟ್ಟಿ, ಮಾತನಾಡುತ್ತಾ, ಭಾರತವನ್ನು ಇಡೀ ವಿಶ್ವಕ್ಕೆ ಪರಿಚಯ ಮಾಡುವುದು ನಮ್ಮ ಕರ್ತವ್ಯವಾಗಿದೆ. ತಾಯಿ ಕೇವಲ ೯ ತಿಂಗಳು ತನ್ನ ಗರ್ಭದಲ್ಲಿ ನಮ್ಮನ್ನ ಇರಿಸಿ ಮತ್ತೆ ಜೀವಮಾನ ಪೂರ್ತಿ ತಾಯಿ ಭಾರತಿ ನಮ್ಮ ಭಾರ ಹೊರುವಳು. ಆದ ಕಾರಣ ಆ ತಾಯಿಯ ಕಾರ್ಯ ಮಾಡುವುದು ನಮ್ಮ ಕರ್ತವ್ಯ. ಯೋಧನಾಗಿ ಕಾರ್ಯನಿರ್ವಹಿಸಿದ್ದು ಹೆಮ್ಮೆ ತಂದಿದೆ ಎಂದರು.
ಸಿಕ್ಕಿಂನಲ್ಲಿ ಮಿಲಿಟರಿ ಪೋಲಿಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದಿವಾಕರ್ರವರ ಸಹಧರ್ಮಿಣಿಯಾಗಿರುವಂತಹ ದೀಪ್ತಿ ದಿವಾಕರ್ ರವರು ಮಾತನಾಡುತ್ತಾ, ನನ್ನ ಇಬ್ಬರೂ ಮಕ್ಕಳನ್ನೂ ಸೇನೆಗೆ ಸೇರಿಸಿ ಭಾರತ ಮಾತೆಯ ಋಣವನ್ನು ತೀರಿಸುತ್ತೇನೆ, ನನ್ನ ಪತಿಯೂ ಕೂಡ ಸೇನೆಯಲ್ಲಿರುವುದು ನನಗೆ ಹೆಮ್ಮೆಯ ವಿಚಾರವಾಗಿದೆ, ಪ್ರತಿಯೊಬ್ಬ ವಿದ್ಯಾರ್ಥಿಯು ಸೇನೆಗೆ ಸೇರುವ ನಿಟ್ಟಿನಲ್ಲಿ ಬಾಲ್ಯದಿಂದಲೇ ಸಂಕಲ್ಪಿಸಬೇಕು ಎಂದರು
ವೇದಿಕೆಯಲ್ಲಿ ರಾಜಸ್ತಾನದಲ್ಲಿ ಸೇನಾನಿಯಾಗಿ ಕಾರ್ಯನಿರ್ವಹಿಸುವ ಜಿ.ಯೋಗಿಶ್ರವರ ತಂದೆ ತಿಮ್ಮಪ್ಪ ಪೂಜಾರಿ, ತಾಯಿ ಧರ್ಣಮ್ಮ, ಜಮ್ಮು ಸೆಕ್ಟರ್ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಸಮಯದಲ್ಲಿ ನೇರ ನೇಮಕಾತಿಯಾದ ಶ್ರೀಯುತ ರಾಜೇಂದ್ರ, ಪ್ರಸಿದ್ಧ ಅಮರನಾಥದಲ್ಲಿ ಸೈನಿಕನಾಗಿರುವ ವಸಂತ ಪೂಜಾರಿರವರ ಮಾತಪಿತೃಗಳಾದ ಪುತ್ತು ಪೂಜಾರಿ ಮತ್ತು ಸುಂದರಿ, ಪ್ರಸ್ತುತ ಅಸ್ಸಾಂನಲ್ಲಿ ಸೇನೆಯಲ್ಲಿರುವ ನಾಗೇಶ್ ,ಸಹಧರ್ಮಿಣಿಯಾದ ರೋಹಿಣಿ, ಹಾಗೂ ತಂದೆ-ತಾಯಿಯವರಾದ ಮೋನಪ್ಪ ಪೂಜಾರಿ ಹಾಗೂ ಡೀಕಮ್ಮ ದಂಪತಿಗಳು, ಕಾರ್ಗಿಲ್ನಲ್ಲಿ ಪ್ರತ್ಯಕ್ಷವಾಗಿ ಭಾಗಿಯಾಗಿರುವ ಮಾಜಿ ಸೈನಿಕರೂ ಆಗಿರುವಂತಹ ಗಣೇಶ್ ಕಾಮತ್,ಚೆನೈಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಣಿಕುಟ್ಟರವರ ತಂದೆ ತಂಗಪ್ಪಣ್ಣ ಹಾಗೂ ಮಂಜುಶ್ರೀ, ಜಮ್ಮು ಕಾಶ್ಮೀರದಲ್ಲಿ ಸೇವೆಸಲ್ಲಿಸುತ್ತಿರುವ ಸುಧೀರ್ ಶೆಟ್ಟಿಯವರ ತಂದೆ ತಾಯಿಯವರಾದ ಸದಾಶಿವ ಶೆಟ್ಟಿ ಹಾಗೂ ಶಾರದಾ ದಂಪತಿಗಳು, ಹೈದರಾಬಾದ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಜಿತ್ರವರ ಪತ್ನಿಯಾದ ಶೀತಲ್ ಹಾಗೂ ತಂದೆ ತಾಯಿಯವರಾದ ರಮಣಿ ಹಾಗೂ ಸೀತಾರಾಮ್ ಮತ್ತು ಮಾಜಿ ಜಿಲ್ಲಾ ಪಂಚಾಯತ್ನ ಸದಸ್ಯ, ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಚೆನ್ನಪ್ಪ ಆರ್ ಕೊಟ್ಯಾನ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಸಾಲ್ಯಾನ್, ಕಮಲಾಪ್ರಭಾಕರ ಭಟ್ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.