ಶ್ರೀರಾಮ ಪ್ರೌಢಶಾಲೆಯಲ್ಲಿ ಆಗತ-ಸ್ವಾಗತ ಕಾರ್ಯಕ್ರಮ 19.6.2015
ಮಧುಕರ ಸಭಾಂಗಣವನ್ನು ತಳಿರು ತೋರಣ ಹಾಗೂ ರಂಗೋಲಿಯಿಂದ ಅಲಂಕಾರ ಮಾಡಲಾಗಿತ್ತು. ವಿದ್ಯಾರ್ಥಿಗಳು ಸಂಭ್ರಮದಿಂದ ಬಂದ ಅತಿಥಿಗಳನ್ನು ಜೈ ಶ್ರೀರಾಮ್ ಹೇಳಿ ಸ್ವಾಗತಿಸಿದರು. ಶಾಲಾ ಪ್ರಾರ್ಥನೆಯನ್ನು ಸರಸ್ವತಿ ವಂದನೆ ನೆರವೇರಿಸಿದರು. ವೇದ ಘೋಷ ಮಾಡುತ್ತಿದ್ದಂತೆ ವಿದ್ಯಾರ್ಥಿಗಳು ಸಾಲಾಗಿ ಬಂದು ವೇದಿಕೆಯಲ್ಲಿ ನಿರ್ಮಿಸಲಾಗಿದ್ದ ಅಗ್ನಿಹೋತ್ರಕ್ಕೆ ಘೃತವನ್ನು ಸಮರ್ಪಿಸಿದರು. ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ವೇದಿಕೆಯಲ್ಲಿದ್ದ ಹಿರಿಯರಿಗೆ ಶಿರಬಾಗಿ ನಮಿಸಿದರು. ಆಶೀರ್ವಾದ ಪಡೆದು ತಿಲಕಧಾರಣೆ ಮಾಡಿಸಿಕೊಂಡರು.
ಹೀಗೆ ಶ್ರೀರಾಮ ಪ್ರೌಢಶಾಲೆಗೆ ಹೊಸದಾಗಿ ಸೇರ್ಪಡೆಯಾದ ೩೪೨ ವಿದ್ಯಾರ್ಥಿಗಳು ಆಗತ-ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ೫೪೦ ಹಿರಿಯ ವಿದ್ಯಾರ್ಥಿಗಳು ಹಾಗೂ ಗಣ್ಯ ಅತಿಥಿಗಳು, ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ|ಪ್ರಭಾಕರ ಭಟ್ ಪ್ರಸ್ತಾವನೆಗೈದು ವಿದ್ಯಾರ್ಥಿಗಳ ಆಂತರಿಕ ಚೈತನ್ಯವನ್ನು ಹೊರತರುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಶಿಕ್ಷಣ ಕೇವಲ ವೈಭವಕ್ಕಾಗಿ ಅಲ್ಲ, ನಮ್ಮ ಹಿರಿಯರು ನಡೆಸಿಕೊಂಡು ಬರುತ್ತಿರುವ ಆಚರಣೆಗಳು, ಮೂಢನಂಬಿಕೆಯಲ್ಲ, ಮೂಲನಂಬಿಕೆಗಳು. ಸಂಸ್ಕಾರ ಆಧಾರಿತ ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ಕಟ್ಟಲು ಸಾಧ್ಯ.ಪ್ರತಿಯೊಂದು ಮಗುವಿನಲ್ಲಿಯೂ ಆಂತರಿಕ ಶಕ್ತಿಯಿದ್ದು ಶ್ರೇಷ್ಠ- ಕನಿಷ್ಠ ಎಂಬ ಭಾವನೆ ಬೆಳೆಯಬಾರದು. ವಿದ್ಯಾರ್ಥಿಗಳು ಶಕ್ತಿಯ ಉದ್ದೀಪನದಿಂದ ಉತ್ತಮ ಶಿಕ್ಷಣ ಪಡೆದು ಸಮಾಜ ಕಾರ್ಯ ಮಾಡುವ ಸಂಕಲ್ಪ ಮಾಡಬೇಕು ಎಂದರು.
ಅತಿಥಿಯಾಗಿ ಮಣಿಪಾಲ ಸಂಸ್ಥೆಯ ಉದ್ಯೋಗಿ ಹಿರಿಯ ವಿದ್ಯಾರ್ಥಿ, ಸುಜಿತ್ ಕೊಟ್ಟಾರಿ ಮಾತನಡಿ ಈ ಶಾಲೆಯಲ್ಲಿ ಸಿಕ್ಕಿರುವ ಸಂಸ್ಕಾರಗಳು ನನ್ನ ಜೀವನಕ್ಕೆ ಅಡಿಪಾಯವಾಗಿದೆ. ಕನ್ನಡ ಮಾಧ್ಯಮದಲ್ಲಿ ಕಲಿತರೂ ಹೆಚ್ಚಿನ ಶಿಕ್ಷಣಕ್ಕೆ ಯಾವುದೂ ಅಡ್ಡಿಯಾಗಿಲ್ಲ ಎಂದ ಅವರು ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ರಾಷ್ಟ್ರದ ಬಗ್ಗೆ ಚಿಂತನೆ ಮಾಡಬೇಕು, ತ್ಯಾಗ ಸೇವೆ ಆದರ್ಶವಾಗಬೇಕು ಎಂದು ಶುಭಹಾರೈಸಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಚಿರಾಗ್ ಆಚಾರ್ಯ, ದಿಯಾ ಚಿರಾಗ್, ಗಣೇಶ ಸೋಮಯಾಜಿ, ಶಾಂತರಾಮ ಕೊಪ್ಪ, ಚಂದ್ರಶೇಖರ ರಾಜು ಬೆಂಗಳೂರು, ಚಿರಾಮಿತ್ ಆಚಾರ್ಯ, ಅಮಿತಾ ಸುಜಿತ್ ಕೊಟ್ಟಾರಿ, ಶ್ರೀಕರ ಪ್ರಭು ಬೆಂಗಳೂರು ಉಪಸ್ಥಿತರಿದ್ದರು. ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಸೋಮಯಾಜಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಸಂತ ಮಾಧವ, ಪ್ರೌಢಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಿಶ್ವನಾಥ ಪ್ರಭು, ಮುತ್ತಪ್ಪ ತುಳಸಿವನ ವೇದಿಕೆಯಲ್ಲಿದ್ದರು.