ಮಕ್ಕಳ ಹೃದಯವನ್ನು ಅರಳಿಸುವ ಭಾವನೆಗಳನ್ನು ಎತ್ತರಿಸುವ ಕೆಲಸ ಶಿಕ್ಷಕರಿಂದ ನಿರಂತರವಾಗಿ ನಡೆಯಬೇಕು ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ|| ಪ್ರಭಾಕರ ಭಟ್ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆ ಮಧುಕರ ಸಭಾಂಗಣದಲ್ಲಿ ಮಂಗಳೂರಿನ ಪ್ರೇಮಕಾಂತಿ ಶಿಕ್ಷಣ ಸಂಸ್ಥೆಯ ಪ್ರಶಿಕ್ಷಾಣಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಕ್ಕಳಲೋಕ ಒಂದು ಅದ್ಭುತಲೋಕ. ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡು ಮನಸ್ಸನ್ನು ಮುಟ್ಟುವಂತೆ ಶಿಕ್ಷಕರು ಕರ್ತವ್ಯ ನಿರ್ವಹಿಸಬೇಕು. ವಿದ್ಯಾರ್ಥಿಗಳನ್ನು ಸಮಾಜಕ್ಕೆ ಹಾಗೂ ದೇಶಕ್ಕೆ ಕೊಡುಗೆಯಾಗಿ ನೀಡುವ ಕೆಲಸ ಶಿಕ್ಷಕರಿಂದಲೇ ಆಗಬೇಕು. ಶಿಕ್ಷಕ ಕೇವಲ ವೃತ್ತಿಯಲ್ಲ. ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಪುಣ್ಯ ಕಾರ್ಯ. ದೇಶಕ್ಕಾಗಿ ತ್ಯಾಗ ಮಾಡಿದ ಮಹಾಪುರುಷರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕು. ಭಾರತದ ಕೊಡುಗೆಯನ್ನು ತಿಳಿಸಿಕೊಡಬೇಕು ಎಂದರು.
ಪ್ರೇಮಕಾಂತಿ ಶಿಕ್ಷಣ ಸಂಸ್ಥೆಯ ಕನ್ನಡ ಉಪನ್ಯಾಸಕಿ ಪೂರ್ಣಿಮಾ, ಮುಖ್ಯ ಶಿಕ್ಷಕ ರಮೇಶ್ ಎನ್. ಹಾಗೂ ಶಿವ ಡಿ.ಡಿ ಮೈಸೂರು, ರಮ್ಯ ಬ್ರಹ್ಮರಕೂಟ್ಲು, ನಾಗರಾಜ ಹೆ.ಡಿ. ಹಾಸನ, ಹೇಮಲತಾ ಅಮ್ಟೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುರೇಶ ಬಿ.ಸಿ. ಮೈಸೂರು, ಬಸನಗೌಡ ಪಾಟೀಲ್ ಹಾವೇರಿ, ಚೈತ್ರಾ ಬೋಳಂತೂರು, ವಿದ್ಯಾಕೇಂದ್ರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಸಂಚಾಲಕರು ಸ್ಮರಣಿಕೆ ನೀಡಿ ಗೌರವಿಸಿದರು.
ಪ್ರಶಿಕ್ಷಣಾರ್ಥಿ ಸೈನಾಝ್ ಸ್ವಾಗತಿಸಿ, ರಾಜಪ್ಪ ಹಾವೇರಿ ವಂದಿಸಿದರು. ಶಹನಾಝ್ ನಿರೂಪಿಸಿದರು. ವಿದ್ಯಾರ್ಥಿಗಳು ಶಾಲೆಗೆ ವಿಶೇಷ ಕೊಡುಗೆಯನ್ನು ಶಾಲಾ ಸಂಚಾಲಕರಿಗೆ ಹಸ್ತಾಂತರಿಸಿದರು.

Leave a Reply