ಶ್ರೀರಾಮ ಪದವಿ ಕಾಲೇಜಿನಲ್ಲಿ ಅಂತರ್ ಕಾಲೇಜು ಮಹಿಳಾ ವಾಲಿಬಾಲ್
ಬಂಟ್ವಾಳ, ಫೆ.೨೮: ಕ್ರೀಡೆಯು ಜೀವನದ ಒಂದು ಅವಿಭಾಜ್ಯ ಅಂಗ.
ಇದರಿಂದ ಜೀವನ ಮೌಲ್ಯವು ಹೆಚ್ಚುವುದು. ಇತ್ತೀಚಿನ ದಿನಗಳಲ್ಲಿ
ಹೆಣ್ಣುಮಕ್ಕಳೇ ಕ್ರೀಡೆಯಲ್ಲಿ ಮುಂಚೂಣಿಯಲ್ಲಿರುವುದು ನಮ್ಮ
ಕ್ರೀಡಾಲೋಕಕ್ಕೆ ಸಲ್ಲಬೇಕಾದ ಗೌರವ. ಕ್ರೀಡೆಯು ಸಕಾರಾತ್ಮಕ
ಸ್ಪರ್ಧಾ ಮನೋಭಾವವನ್ನು ಪ್ರತೀ ಸ್ಫರ್ಧಾಳುಗಳಲ್ಲಿ
ಮೂಡಿಸುವುದರ ಜೊತೆಗೆ ಸೋಲು ಗೆಲುವುಗಳಲ್ಲೂ ಸಮಾನವಾಗಿ
ಸ್ವೀಕರಿಸಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ
ನಿರ್ದೇಶಕ ಡಾ| ಕಿಶೋರ್ ಕುಮಾರ್ ಸಿ ಕೆ ಇವರು ಮಂಗಳೂರು
ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಹಿಳಾ ವಾಲಿಬಾಲ್ ಪಂದ್ಯಾಟ
ವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ, ಕಲ್ಲಡ್ಕ ಇದರ
ದಶಮಾನೋತ್ಸವದ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ
ಅಂತರ್ ಕಾಲೇಜು ಮಹಿಳಾ ವಾಲಿಬಾಲ್ ಪಂದ್ಯಾಟವು ಶ್ರೀರಾಮ ಪದವಿ ಕಾಲೇಜಿನ
ಆವರಣದಲ್ಲಿ ಉದ್ಘಾಟನೆಗೊಂಡಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಇದರ ಅಧ್ಯಕ್ಷ
ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ಯಾವುದೇ ಉತ್ತಮ ಕೆಲಸ
ಮಾಡುವ ಮೊದಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಸುದೃಢವಾಗಲು
ಕ್ರೀಡೆ ಅಗತ್ಯ. ವಿಶ್ವದ ಯಾವುದೇ ದೇಶದಲ್ಲೂ ಭಾರತೀಯ
ಮಹಿಳೆಯರಂತೆ ದೇಶಕ್ಕಾಗಿ ಹೋರಾಡಿದ ಇತಿಹಾಸವೇ ಇಲ್ಲ. ಅಂತೆಯೇ
ನಮ್ಮ ಮಹಿಳೆಯರು ಪುರುಷರಿಗೆ ಸಮಾನ ರೀತಿಯಲ್ಲಿ ಕ್ರೀಡಾ
ಸ್ಪರ್ಧೆಯಲ್ಲಿ ಭಾಗವಹಿಸುವುದು ಹೆಮ್ಮೆಯ ವಿಚಾರ ಎಂದು
ಸ್ಪರ್ಧಾಳುಗಳಿಗೆ ಶುಭ ಹಾರೈಸಿ ವಾಲಿಬಾಲ್ ಕ್ರೀಡಾಂಗಣವನ್ನು
ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ
ಅಧ್ಯಕ್ಷ ನಾರಾಯಣ ಸೋಮಯಾಜಿ ವಹಿಸಿದ್ದರು. ವೇದಿಕೆಯಲ್ಲಿ
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹ
ನಿರ್ದೇಶಕ ಡಾ| ಪ್ರಸನ್ನ ಬಿ ಕೆ., ಸಂಸ್ಥೆಯ ಆಡಳಿತ ಸಮಿತಿ ಸದಸ್ಯ
ಗೋಪಾಲ ಶೆಣೈ, ಪದವಿ ವಿಭಾಗದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ
ನಾಗೇಶ್ ಪೂಜಾರಿ ಇರಾ ಇವರು ಉಪಸ್ಥಿತರಿದ್ದರು. ಅತಿಥಿ ಅಭ್ಯಾಗತರನ್ನು
ಚೆಂಡೆ ವಾದನದ ಮೂಲಕ ವಿದ್ಯಾರ್ಥಿಗಳು ಸ್ವಾಗತಿಸಿ ಬರಮಾಡಿಕೊಂಡರು.
೨೩ ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಲಿವೆ.