ರಾಷ್ಟ್ರೀಯ ಶಿಕ್ಷಣ ನೀತಿಯು ಆಧುನಿಕ ಸವಾಲುಗಳನ್ನು ಎದುರಿಸಲು ಅವಶ್ಯವಿರುವ ಎಲ್ಲಾ ಬದಲಾವಣೆಗಳಿಗೆ ಒಡ್ಡಿಕೊಳ್ಳಲು ಸಮರ್ಥವಾಗಿದೆ. ಇಂದು ಶಿಕ್ಷಣದ ಜೊತೆಗೆ ಉದ್ಯೋಗವಕಾಶಗಳು ಅನಿವಾರ್ಯವಾದುದರಿಂದ ಅದನ್ನು ಮನಗಂಡು ಅದಕ್ಕೆ ಸರಿಯಾಗಿ ಪಠ್ಯಕ್ರಮ ರಚನೆ ನಡೆದಿದ್ದು ಕಂಪ್ಯೂಟರ್ ವಿಜ್ಞಾನಕ್ಕೆ ವಿಶೇಷ ಒತ್ತು ನೀಡಲಾಗಿದೆ ಎಂದು ಕಲ್ಲಡ್ಕದ ಶ್ರೀರಾಮ ಪದವಿ ಕಾಲೇಜಿನ ಬಿಸಿಎ ಸೇತುಬಂಧ ತರಗತಿ ಟೆಕ್ವಿಷನ್ ಉದ್ಘಾಟಿಸಿ ಸಂಸ್ಥೆಯ ಸಂಸ್ಥಾಪಕರು, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಆಶಯ ನುಡಿಗಳನ್ನಾಡಿದರು. ೧೯೮೦ರ ದಶಕದಲ್ಲಿ ಗ್ರಾಮೀಣ ಬಡ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಆರಂಭವಾದ ಈ ಸಂಸ್ಥೆ ಇಂದು ೨೫೦೦ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಪದವಿ ಹಂತದಲ್ಲೂ ಇದರ ಮುಂದುವರಿಕೆಯಾಗಿ ಬಿಸಿಎ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ೪೫೦೦೦ ಮೌಲ್ಯದ ಉಚಿತ ಲ್ಯಾಪ್ಟಾಪ್ ನೀಡುತ್ತಿದ್ದು ಕೋವಿಡ್-೧೯ರ ಸಂಕಷ್ಟ ಪರಿಸ್ಥಿತಿಯನ್ನು ಮನಗಂಡು ಕೇವಲ ೧೮೦೦೦ರೂಗಳಿಗೆ ಬಿಸಿಎ ಶಿಕ್ಷಣವನ್ನು ನೀಡಲಾಗುತ್ತಿದೆ. ಹಾಗೂ ಬಿಸಿಎ ಶಿಕ್ಷಣದ ಜೊತೆಗೆ ಉದ್ಯೋಗ ಗಳಿಕೆಗೆ ಬೇಕಾದ ಇನ್ನಿತರ ಸರ್ಟಿಫಿಕೇಟ್ ಕೋರ್ಸುಗಳನ್ನು ಆರಂಭಿಸಲಾಗಿದೆ ಎಂದರು. ಮಧ್ಯಾಹ್ನ ಪದವಿ ವಿದ್ಯಾರ್ಥಿಗಳಿಗೂ ಉಚಿತ ಭೋಜನ ವ್ಯವಸ್ಥೆಯಿದ್ದು ಆರ್ಥಿಕವಾಗಿ ಅತ್ಯಂತ ಹಿಂದುಳಿದವರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬಹುದು ಎಂದರು. ಬಿಸಿಎ ಗೆ ದಾಖಲಾಗಲು ಇನ್ನೂ ೧೦ ದಿನಗಳ ಅವಕಾಶವಿದ್ದು ಕೆಲವೇ ಸೀಟುಗಳು ಲಭ್ಯವಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ಶ್ರೀ ವಸಂತ ಮಾಧವ ವಹಿಸಿದ್ದರು. ಬಿಸಿಎ ಪ್ರಾಧ್ಯಾಪಕಿ ಧನ್ಯಶ್ರೀ ಸ್ವಾಗತಿಸಿ, ಸ್ವಸ್ತಿಕಾ ವಂದಿಸಿ, ಕವಿತಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ಕಟ್ಟೆ, ಐಕ್ಯೂಎಸಿ ಸಂಯೋಜಕಿ ಸುಕನ್ಯಾ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.