ದಿನಾಂಕ 30.08.2023ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ದಾದಿಯರೊಂದಿಗೆ ಆಚರಿಸಲಾಯಿತು.
ರಕ್ಷಾಬಂದನ ಎಂಬುದರ ತಾತ್ಪರ್ಯವೇನೆಂದರೆ ಪ್ರೀತಿಯ ಭಾವದಿಂದ ತನ್ನ ರಕ್ಷಣೆಯ ಜವಾಬ್ದಾರಿಯನ್ನು ಪರಸ್ಪರ ಹಂಚಿಕೊಳ್ಳುವುದು ಎಂದು ಹೇಳಬಹುದು. ಮನುಷ್ಯನು ತನ್ನ ಬದುಕಿನಲ್ಲಿ ಹಲವಾರು ವಸ್ತುಗಳ, ಸಂಬಂಧಗಳ ರಕ್ಷಣೆ ಮಾಡಬೇಕು. ಅದು ಹೆಚ್ಚಾಗಿ ಸ್ತ್ರೀ ಸಂಬಂಧಿತವಾದದ್ದು ಎನ್ನುವುದು ವಿಶೇಷ. ಇದರ ತಾತ್ಪರ್ಯವೇನೆಂದರೆ, ಸ್ತ್ರೀಯರು ಅಬಲರು ಎಂದಲ್ಲ, ಅವರ ರಕ್ಷಣೆ ನಮ್ಮ ಕರ್ತವ್ಯವೆಂದು. ಆದ್ದರಿಂದ ಪುರುಷನು ಭೂಮಿಯನ್ನು ತಾಯಿ ಎಂಬ ಭಾವದಿಂದ, ವಿದ್ಯೆಯನ್ನು ಸರಸ್ವತಿ ಎಂಬ ಭಾವದಿಂದ, ಸಹೋದರಿಯನ್ನು ತಾಯಿ ಸಮಾನರು ಎಂಬ ಭಾವದಿಂದ ಹೀಗೆ ಬೇರೆ ಬೇರೆ ಕಾರಣಗಳಿಂದ ನಾವು ಅವರನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ಎಲ್ಲಾ ಕಾರ್ಯಗಳಿಂದ ರಕ್ಷಾಬಂಧನವು ಸಂಘಟಿತವಾಗಿ ಹರಿದುಬಂದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರು ಅವರೊಂದಿಗಿರುವ ದಾದಿಯರು, ದೇಶ ಕಾಯುವ ಯೋಧರು, ಮಾಹಿತಿ ನೀಡಿ ರಕ್ಷಿಸುವ ಮಾಧ್ಯಮದವರು, ಅನ್ನ ನೀಡುವ ರೈತರು, ಅಕ್ಷರ ಕಲಿಸುವ ಗುರುಗಳು, ಆರಕ್ಷಕರು ಮುಂತಾದರೆಲ್ಲರೂ ನಮ್ಮ ರಕ್ಷಕರು. ಹೀಗೆ ಹಲವಾರು ಪ್ರಾಮಾಣಿಕ ಶಕ್ತಿಗಳು ನಮ್ಮ ರಕ್ಷಕರೇ ಆಗಿರುವರು. ಇವರೊಂದಿಗೆ ಸಾಧ್ಯವಾದಷ್ಟು ಭಾವಬಾಂಧವ್ಯ ದಾರದೊಂದಿಗೆ ಬೆಸೆಯೋಣ. ಸ್ತ್ರೀಸಂಕುಲವನ್ನು ಹಾಗೆಯೇ ತಾಯಿ ಭಾರತೀಯ ಸಂರಕ್ಷಣೆ ನಮ್ಮ ಮುಡಿಪಾಗಿರಲಿ ಎನ್ನುತ್ತಾ ರಕ್ಷಾಬಂಧನದ ಮಹತ್ವವನ್ನು ಶ್ರೀರಾಮ ಪರವಿಪೂರ್ವ ವಿಭಾಗದ ಸಂಸ್ಕೃತ ಉಪನ್ಯಾಸಕರಾದ ಮಹೇಂದ್ರ ತಿಳಿಸಿಕೊಟ್ಟರು.
ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರು ಹೇಗೆ ಪ್ರಮುಖ ಪಾತ್ರ ವಹಿಸುತ್ತಾರೋ, ಅಷ್ಟೇ ಜವಾಬ್ದಾರಿಯುತ ಕರ್ತವ್ಯವನ್ನು ನಿರ್ವಹಿಸುವಲ್ಲಿ ದಾದಿಯರ ಪಾತ್ರವೂ ಮಹತ್ವದ್ದಾಗಿರುತ್ತದೆ. ರೋಗಿಗಳ ಯೋಗಕ್ಷೇಮ, ಸುರಕ್ಷತೆ ಮತ್ತು ಚೇತರಿಕೆಯಲ್ಲಿ ಪ್ರಮುಖರಾಗಿರುತ್ತಾರೆ. ದಾದಿಯರು ಎದುರಿಸುವ ಅನೇಕ ಸವಾಲುಗಳ ಹೊರತಾಗಿಯೂ ಹೊಸ ಜೀವವು ಜಗತ್ತನ್ನು ಪ್ರವೇಶಿಸಲು ಮತ್ತು ಅನಾರೋಗ್ಯಗೊಂಡವರನ್ನು ನೋಡಿಕೊಳ್ಳುವ ದಣಿವರಿಯಿಲ್ಲದೆ ಕೆಲಸ ಮಾಡುತ್ತಾರೆ. ಕೊರೊನಾ ಸಂದರ್ಭ ಸೇರಿದಂತೆ ಎಲ್ಲಾ ಸಂದರ್ಭಗಳಲ್ಲಿ ಒತ್ತಡದ ಕೆಲಸಗಳ ಮಧ್ಯೆ ತಮ್ಮ ಕುಟುಂಬವನ್ನು ಬದಿಗೊತ್ತಿ ಸದಾ ಲವಲವಿಕೆಯಿಂದ ರೋಗಿಯ ಹಾರೈಕೆ ಮಾಡುವ ದಾದಿಯರ ಕಾರ್ಯ ಶ್ಲಾಘನೀಯ. ಎಂದು ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕರಾದ ರಮೇಶ್ ಎನ್ ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು..
ಕಾರ್ಯಕ್ರಮದಲ್ಲಿ ದಾದಿಯರಿಗೆ ಸಂಸ್ಥೆಯ ಹಿರಿಯರಾದ ಡಾ| ಕಮಲಾ ಪ್ರಭಾಕರ್ ಭಟ್ ಕಲ್ಲಡ್ಕ ಶಾಲು ಹೊದಿಸಿ ಸನ್ಮಾನಿಸಿದರು. ಹಾಗೂ ಅಧ್ಯಾಪಕವೃಂದದವರು ಆರತಿ ಬೆಳಗಿ, ಬಾಗಿನ ನೀಡಿ ಗೌರವಿಸಿದರು.
ಇದೆ ಸಂದರ್ಭದಲ್ಲಿ ಕಳೆದ ಹತ್ತು ವರ್ಷಗಳಿಂದ ಪಂಜಾಬ್ನಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆಗೊಂಡಿರುವ ಯೋಧ ಅರುಣ್ ಕಡೇಶಿವಾಲಯ ಇವರಿಗೆ ಶಾಲು ಹೊದಿಸಿ, ರಕ್ಷೆ ಕಟ್ಟಿ ಗೌರವಿಸಲಾಯಿತು.
ನಂತರ ಕಾರ್ಯಕ್ರಮದಲ್ಲಿ ೭ನೇ ತರಗತಿಯ ವೈಷ್ಣವಿ ಕಡ್ಯ ಹಾಗೂ ಧಾತ್ರಿ ಪ್ರೇರಣಾ ಗೀತೆ ಹಾಡಿದರು.
ನನಗೆ ಬಾಲ್ಯದ ನೆನಪು ಬಂತು. ಇಲ್ಲಿಯ ಸಂಸ್ಕೃತಿ, ಸಂಸ್ಕಾರ, ಶಿಸ್ತು ಬದ್ಧ ವಾತಾವರಣ ಕಂಡು ಕಣ್ತುಂಬಿ ಬಂತು. ಇಲ್ಲಿ ನೀವು ಕಲಿತ ಇದ್ದೀರಿ ಎಂದರೆ ಅದಕ್ಕೆ ನೀವು ಪುಣ್ಯಮಾಡಿದ್ದೀರಿ. ಇಲ್ಲಿರುವ ಶಿಸ್ತು ಕಂಡಾಗ ದೇವಲೋಕದಲ್ಲಿ ಇದ್ದಂತೆ ಭಾವವಾಗುತ್ತಿದೆ. ಹೂ ತಂದ ಮನೆಗೆ ಹುಲ್ಲು ಹೊತ್ತು ತರುವ ಎನ್ನುವ ಗಾದೆಯಂತೆ, ನಾವು ಹೂವನ್ನು ಕೊಟ್ಟರೆ ದೇವರು ನಮಗೆ ಬೇರೆ ರೂಪದಲ್ಲಿ ಬಂದು ಸಹಾಯ ಮಾಡುತ್ತಾನೆ, ಅಂತೆಯೇ ನೀವು ಮನೆಯಲ್ಲಿನ ಹೂವುಗಳಿಂದ ದೇವರಿಗೆ ಮಾಡಿರುವ ಅಲಂಕಾರ ಮಾಡಿರುವುದು ಸಂತಸವಾಗಿದೆ. ಹಾಗೆಯೇ ನಮ್ಮನ್ನು ಗುರುತಿಸಿ ಕರೆದು ಈ ರೀತಿಯಾಗಿ ಗೌರವಿಸಿರುವುದು ಸಂತಸ ತಂದಿದೆ. ಎಂದು ವಿಟ್ಲದ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಯಾದ ಚಂದ್ರಾವತಿ ಭಾವುಕರಾಗಿ ನುಡಿದರು.
ಬೊಳಂತೂರು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ವೆರೋನಿಕಾ ಮಾತನಾಡಿ, ಎಲ್ಲಾ ವರ್ಗದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿರುವುದು ನೋಡಿ ತುಂಬಾ ಸಂತೋಷವಾಯಿತು. ನಾವೆಲ್ಲರೂ ಒಂದೇ ಎನ್ನುವ ಭಾವದೊಂದಿಗೆ ಈ ರಕ್ಷಾಬಂಧನವನ್ನು ಆಚರಿಸುತ್ತಿರುವುದಕ್ಕೆ ಸಂತಸವಾಯಿತು. ನಮ್ಮನ್ನು ಕರೆದು ಗುರುತಿಸಿದಕ್ಕೆ ಈ ವಿದ್ಯಾಸಂಸ್ಥೆಗೆ ಧನ್ಯವಾದಗಳು. ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತಾ ಹೇಳಿದರು.
ನಂತರ ಜಿಲ್ಲಾಮಟ್ಟದ ಗಣಿತ ವಿಜ್ಞಾನ ಮೇಳದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಕೃತ ಸಪ್ತಾಹದ ಅಂಗವಾಗಿ ನಡೆದ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.
`ವೇದಿಕೆಯಲ್ಲಿ ಬಾಳ್ತಿಲ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಸರಸ್ವತಿ ಎನ್, ನರಿಕೊಂಬು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಸುಮತಿ ಎಂ, ಅಮ್ಟೂರು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಜಯಂತಿ, ಗೊಳ್ತಮಜಲು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ರೋಹಿಣಿ ಬಿ, ಮಂಗಳೂರು ವೆನ್ಲಾಕ್ ಆಸ್ಪತ್ರೆ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಸೌಮ್ಯ, ವಿಟ್ಲಮುಡ್ನೂರು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಕೀರ್ತಿ, ಕೋಡಪದವು ಆರೋಗ್ಯ ಸುರಕ್ಷಾ ಅಧಿಕಾರಿ ಸೌಮ್ಯ, ಕೋಡಪದವು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಜ್ಯೋತಿ ಪಿ, ವಿಟ್ಲಪಡ್ನೂರು ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಗೀತಾವತಿ, ವಿಟ್ಲ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ದೀಪ ಮತ್ತು ಸುಶೀಲ, ಕಲ್ಲಡ್ಕ ಪುಷ್ಪರಾಜ್ ಆಸ್ಪತ್ರೆಯ ಶುಶ್ರೂಷಕಿ ಅಶ್ವಿನಿ ಸುದೆಕ್ಕಾರು ಮತ್ತು ಕಮಲಾ ಕೆ ಎಸ್, ಮಂಗಳೂರು ತಾರಾ ಆಸ್ಪತ್ರೆಯ ಶುಶ್ರೂಷಕಿ ಚೈತ್ರ ಪಿ, ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ಶುಶ್ರೂಷಕಿ ಭವ್ಯ ಅಸೈಗೋಳಿ, ರಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಸುನೀತಾ, ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕಾರಿಣಿ ಸದಸ್ಯರಾದ ಡಾ| ಕಮಲಾ ಪ್ರಭಾಕರ್ ಭಟ್ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ವೈಷ್ಣವಿ ಕಡ್ಯ ಸ್ವಾಗತಿಸಿ, ಪ್ರಜ್ಞಾ ವಂದಿಸಿ ಸುಶ್ಮಿತಾ ಭಟ್ ನಿರೂಪಿಸಿದರು.